ಬೆಂಗಳೂರು, ಜ. 07 (DaijiworldNews/MB) : ''ಆಡಳಿತಾರೂಢ ಬಿಜೆಪಿಯ ಕೇಂದ್ರ ನಾಯಕತ್ವವು ಕರ್ನಾಟಕದಲ್ಲಿ ಬಹುನಿರೀಕ್ಷಿತ ಸಂಪುಟ ವಿಸ್ತರಣೆಯ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸಲಿದೆ'' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಹೇಳಿದರು.
"ನಮ್ಮ ಪಕ್ಷದ ಕೇಂದ್ರ ನಾಯಕರು ಶೀಘ್ರದಲ್ಲೇ ರಾಜ್ಯ ಸಂಪುಟ ವಿಸ್ತರಣೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷದ ನಾಯಕತ್ವದ ನಿರ್ದೇಶನದಂತೆ ಸಂಪುಟ ವಿಸ್ತರಿಸಲಾಗುವುದು ಅಥವಾ ಪುನರ್ರಚಿಸಲಾಗುವುದು" ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮಕರ ಸಂಕ್ರಾಂತಿ ಹಬ್ಬ ಮತ್ತು ಉತ್ತರಾಯಣದ ಆಗಮನದ ಸಂದರ್ಭ ಜನವರಿ 14 ರ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂಬ ಊಹಾಪೋಹಗಳು ಹರಡಿವೆ.
34 ಸದಸ್ಯರ ಸಚಿವಾಲಯದಲ್ಲಿ ಏಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ನಡೆಯಲಿರುವ ಮೂರನೇ ಸಂಪುಟ ವಿಸ್ತರಣೆಯು ಕೆಲವು ಕಾರಣಗಳಿಂದ ವಿಳಂಬವಾಗಿದೆ. ಯಡಿಯೂರಪ್ಪ ಅವರಿಗೆ 78 ವರ್ಷ ವಯಸ್ಸಾಗಿರುವುದರಿಂದ ಮುಖ್ಯಮಂತ್ರಿ ಬದಲಾವಣೆ ಮಾಡಲಾಗುತ್ತದೆ ಎಂದು ವದಂತಿಗಳು ಕೂಡಾ ಇದೆ.
ಆದರೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪಕ್ಷದ ವ್ಯವಹಾರಗಳ ಉಸ್ತುವಾರಿ ಅರುಣ್ ಸಿಂಗ್, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. 2023 ರ ಮುಂದಿನ ವಿಧಾನಸಭಾ ಚುನಾವಣೆಯವರೆಗೆ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಕೂಡಾ ಹೇಳಿದ್ದಾರೆ.
ಸಚಿವ ಸ್ಥಾನ ಆಕಾಂಕ್ಷಿಗಳ ಪೈಕಿ ಆರ್.ಶಂಕರ್ ಮಂಗಳವಾರ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ಜನವರಿ ಮೂರನೇ ವಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಸಂಪುಟ ವಿಸ್ತರಿಸುವುದಾಗಿ ಹೇಳಿದ್ದಾರೆ.
2019 ರ ಡಿಸೆಂಬರ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ನಂತರ ಕಾಂಗ್ರೆಸ್ ಮತ್ತು ಜೆಡಿ-ಎಸ್ನಿಂದ ಪಕ್ಷಾಂತರಗೊಂಡ 10 ಶಾಸಕರನ್ನು ಸೇರ್ಪಡೆಗೊಳಿಸಿದ್ದು ಆ ಬಳಿಕ ಫೆಬ್ರವರಿ 6, 2020 ರಂದು ಎರಡನೇ ಬಾರಿಗೆ ಸಂಪುಟವನ್ನು ವಿಸ್ತರಿಸಲಾಯಿತು. 2019 ಆಗಸ್ಟ್ 20 ರಂದು ನಡೆದ ಮೊದಲ ಮಂತ್ರಿಮಂಡಲ ವಿಸ್ತರಣೆ ಸಂದರ್ಭ 17 ಮಂತ್ರಿಗಳನ್ನು ಸೇರಿಸಲಾಗಿತ್ತು.
2019 ರ ಜುಲೈನಲ್ಲಿ ಕಾಂಗ್ರೆಸ್ ಮತ್ತು ಜೆಡಿ-ಎಸ್ನಿಂದ 10 ಶಾಸಕರು ರಾಜೀನಾಮೆ ನೀಡಿದ ಬಳಿಕ 14 ತಿಂಗಳ ಜೆಡಿ-ಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನವಾಯಿತು. ಬಳಿಕ ಯಡಿಯೂರಪ್ಪ ಅವರು 2019 ಜುಲೈ 26 ರಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.