ನವದೆಹಲಿ, ಜ. 07 (DaijiworldNews/MB) : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ಪೊಲೀಸರೊಂದಿಗೆ ಸಂಘರ್ಷ, ದಾಂಧಲೆ ನಡೆಸಿರುವ ಘಟನೆ ನಡೆದಿದ್ದು ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಜಯ ಗಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟ್ರಂಪ್ ಬೆಂಬಲಿಗರು ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ ಭದ್ರತೆ ಉಲ್ಲಂಘನೆ ಮಾಡಿ ಕ್ಯಾಪಿಟಲ್ ಕಟ್ಟಡ್ಡಕ್ಕೆ ನುಗ್ಗಿ ದಾಂಧಲೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಅಮೇರಿಕಾ ಕಾಂಗ್ರೆಸ್ನ ಅನೇಕ ಅಧಿಕಾರಿಗಳು ಕೂಡಾ ಗಾಯಗೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ''ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿ ನೋಡಿ ತೀವ್ರ ಬೇಸರವಾಯಿತು. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಯ ಮೂಲಕ ಅಧಿಕಾರ ದುರ್ಬಳಕೆ ಮಾಡಲು ಪ್ರಜಾಪ್ರಭುತ್ವ ಪ್ರಕ್ರಿಯೆ ಆಸ್ಪದ ನೀಡಲಾರದು'' ಎಂದು ಹೇಳಿದ್ದಾರೆ.