ಬೆಂಗಳೂರು, ಜ. 07 (DaijiworldNews/MB) : ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಯೊಬ್ಬನಿಗೆ ಬುಧವಾರ ತಡರಾತ್ರಿ ನಂದಿನಿ ಲೇಔಟ್ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ರೌಡಿ ಕಾರ್ತಿಕ್ ಅಲಿಯಾಸ್ ಗುಂಡ ಇತ್ತೀಚೆಗೆ ಸುಲಿಗೆಯೊಂದು ಮಾಡಿದ್ದು ತಲೆಮರೆಸಿಕೊಂಡಿದ್ದ. ಬುಧವಾರ ರಾತ್ರಿ ಓಕಳಿಪುರ ಬಳಿ ಕಾಣಿಸಿಕೊಂಡಿದ್ದು ಪೊಲೀಸರು ಹಿಡಿಯಲು ಮುಂದಾದ ಸಂದರ್ಭ ಕಾನ್ಸ್ಟೆಬಲ್ ಉಮೇಶ್ ಎಂಬವರ ಮೇಲೆಯೇ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಪಿಎಸ್ಐ ಎಚ್.ಎನ್. ನಿತ್ಯಾನಂದಾಚಾರಿ ಅವರು ರೌಡಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದು ಪ್ರಸ್ತುತ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಈ ರೌಡಿಯು 15ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.