ಉಳ್ಳಾಲ, ಜ 06 (DaijiworldNews/SM): ಮಂಜನಾಡಿ ಗ್ರಾಮದಲ್ಲಿ ಕಾಗೆಗಳು ಸತ್ತುಬಿದ್ದ ಹಿನ್ನೆಲೆಯಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತು.
ಮಂಜನಾಡಿ ಗ್ರಾಮದ ಅರಂಗಡಿ ಪ್ರದೇಶಕ್ಕೆ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಐದು ಕಾಗೆಗಳು ಸತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾಗೆಗಳ ಕಳೆಬರಹವನ್ನು ಗುಂಡಿ ತೋಡಿ ಹೂಳಲು ನಿರ್ದೇಶಿಸಲಾಗಿದೆ. ಹಾಗೂ ಸುತ್ತಲಿನ ಪ್ರದೇಶಕ್ಕೆ ಕೀಟನಾಶಕ ಸಿಂಪಡಿಸಲು ಸೂಚಿಸಲಾಗಿದೆ.
ಇನ್ನು ಪ್ರದೇಶಕ್ಕೆ ಪಶುಸಂಗೋಪನೆ ವೈದ್ಯಾಧಿಕಾರಿ ಭೇಟಿ ನೀಡಿ ಒಂದು ಕಾಗೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಮಂಜನಾಡಿ ಗ್ರಾಮದಲ್ಲಿ 10401 ಜನಸಂಖ್ಯೆ ಇದ್ದು, ಈಗಾಗಲೇ ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಂದ ಮನೆ ಮನೆ ಸಮೀಕ್ಷೆ ನಡೆಸಲಾಗಿದೆ. ಇದುವರೆಗೆ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಕರಪತ್ರಗಳ ಮೂಲಕ ಆರೋಗ್ಯ ಶಿಕ್ಷಣವನ್ನು ನೀಡುವ ಕ್ರಮವನ್ನು ಕೈಗೊಳ್ಳಲಾಗಿದೆ. ವೈದ್ಯಾಧಿಕಾರಿಯವರ ತಂಡವನ್ನು ಪ್ರತಿನಿತ್ಯ ಸ್ಥಳಕ್ಕೆ ಭೇಟಿಕೊಟ್ಟು ಕಾಲಕಾಲಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಪಶುಸಂಗೋಪನಾ ವೈದ್ಯಾಧಿಕಾರಿ ಹಾಗೂ ಉಪನಿರ್ದೇಶಕರ ಜೊತೆಗೆ ಚರ್ಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.