ಬೆಂಗಳೂರು, ಜ 06 (DaijiworldNews/SM): ಕೊರೋನಾ ಕಾರಣದಿಂದ ಶೈಕ್ಷಣಿಕ ವರ್ಷವೇ ಸವಾಲಾಗಿದ್ದ ನಡುವೆಯೇ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲಾಗಿದೆ. ಈ ನಡುವೆ ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ನಡೆಸಲು ತೀರ್ಮಾನಿಸಲಾಗಿದೆ. ಹಾಗೂ ಜೂನ್ ಮೊದಲ ವಾರದಲ್ಲಿ ಎಸ್ ಎಸ್ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಎರಡೂ ವಿಭಾಗದ ವಿದ್ಯಾರ್ಥಿಗಳ ಮುಂದಿನ ಆಯ್ಕೆ ಮಹತ್ವದ್ದಾಗಿರುವುದರಿಂದ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಮೌಲ್ಯ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತರಗತಿಗಳನ್ನು ಆರಂಭಿಸಲಾಗಿದೆ.
ಪರೀಕ್ಷಾ ದೃಷ್ಟಿಯಿಂದ ಬೋಧನೆ, ಕಲಿಕೆಗಾಗಿ ಗುರುತಿಸಿರುವ ವಿಷಯಾಂಶಗಳನ್ನು ಅಂತಿಮಗೊಳಿಸಲಾಗಿದೆ. ಇದರ ವಿವರಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗಿದೆ. ಯಾವುದೇ ವಿದ್ಯಾರ್ಥಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಟ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಈ ತರಗತಿಗಳ ಪಠ್ಯ ಕಡಿತಗೊಳಿಸುವ ಯಾವುದೇ ನಿರ್ಧಾರ ಸರಕಾರದ ಮುಂದಿಲ್ಲ ಎಂದಿರುವ ಅವರು, ಶಾಲಾ ಹಂತದಲ್ಲೇ ಮೌಲ್ಯ ಮಾಪನ ನಡೆಯಲಿದೆ. ಮಕ್ಕಳ ಕಲಿಕಾ ಸಾಮಾರ್ಥ್ಯದ ಆಧಾರದಲ್ಲಿ ಸರಳಾ ರೀತಿಯಲ್ಲಿ ಮೌಲ್ಯಮಾಪನ ನಡೆಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.