ಮಂಗಳೂರು, ಜ 06 (DaijiworldNews/SM): ಬಂಟ್ವಾಳದ ಪಾಣೆಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದೇ ಪದೇ ನಾಯಕರಿಗೆ ಶಿಸ್ತಿನ ಪಾಠ ಮಾಡಿದ ಸನ್ನಿವೇಶ ನಡೆದಿದೆ. ಸಮಾವೇಶದಲ್ಲಿ ಅಶಿಸ್ತು ತೋರಿದ ನಾಯಕರಿಗೆ ಡಿಕೆಶಿಯವರು ಸಮಾವೇಶದ ವೇದಿಕೆಯಿಂದಲೇ ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸುವ ಅವಕಾಶದಿಂದ ಹಲವಾರು ಕಾರ್ಯಕರ್ತರು ವಂಚಿತರಾಗಿದ್ದಾರೆ. ಕೇವಲ ಕೆಲವೇ ಕೆಲವರಿಗೆ ಅವಕಾಶ ಸಿಕ್ಕಿದೆ. ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಎಲ್ಲರೂ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿ ಹಾಗೂ ಶಿಸ್ತು ಕಾಪಾಡಿ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
ತಮಗೆ ಸಮಾವೇಶದಲ್ಲಿ ಗಂಭೀರತೆ ಇಲ್ಲದಿದ್ದರೆ ಬೇರೆ ಕಾರ್ಯಕರ್ತರಿಗೆ ಅವಕಾಶ ಕೊಡಿ. ಅವಕಾಶ ಸಿಕ್ಕಿರುವುದನ್ನು ಸದುಪಯೋಗ ಮಾಡಿಕೊಳ್ಳಿ ಎಂದಿರುವ ಅವರು, ಪದೇ ಪದೇ ಶಿಸ್ತಿನ ಪಾಠ ಮಾಡಿದ್ದಾರೆ. ಇನ್ನು 150 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡಲಿದ್ದೇನೆ. ಪ್ರತಿ ಕ್ಷೇತ್ರವನ್ನು ನಾವು ಬಲಪಡಿಸಬೇಕಾಗಿದೆ. ನಮಗೆ ಪಕ್ಷ ಸಂಘಟನೆ ಬಹಳ ಮುಖ್ಯವಾಗಿದೆ ಎಂಬುವುದಾಗಿ ಸಮಾವೇಶ ಭಾಷಣದಲ್ಲೇ ಡಿಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.