ಉಡುಪಿ, ಜ.06 (DaijiworldNews/PY): "ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು" ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಸೂಚನೆ ನೀಡಿದರು.
ಅವರು ಬುಧವಾರ ಕಾರ್ಕಳದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ , ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
"ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುವ ಗಣಿಗಾರಿಕೆ ಮತ್ತು ಮರಳುಗಾರಿಕೆ ವಿರುದ್ದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅಕ್ರಮಗಳನ್ನು ನಿಯಂತ್ರಿಸಬೇಕು, ಗಣಿಗಳಿಗೆ ಅನುಮತಿ ನೀಡುವಾಗ ಎಲ್ಲಾ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕು, ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಗೆ ಅನುಮತಿಯನ್ನು ನಿರಾಕರಿಸಬೇಡಿ" ಎಂದು ಸೂಚನೆ ನೀಡಿದರು.
ಉಡುಪಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 24 ಕೋಟಿ ರಾಜಸ್ವ ಸಂಗ್ರಹ ಗುರಿ ನೀಡಿದ್ದು, ಇದುವರೆಗೆ 16.29 ಕೋಟಿ ರಾಜಸ್ವ ಸಂಗ್ರಹಿಸಿ ಶೇ.67 ರಷ್ಟು ಪ್ರಗತಿ ಸಾಧಿಸಿದೆ, ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣ ಗುರಿ ಸಾಧಿಸುವಂತೆ ಸಚಿವರು ಸೂಚಿಸಿದರು.
ಮರಳುಗಾರಿಕೆ ಅಕ್ರಮ ತಡೆಗಟ್ಟಲು ಮರಳು ತೆಗೆಯುವ ದೋಣಿಗಳ ಜಿಪಿಎಸ್ ಮತ್ತು ಮರಳು ಸಾಗಾಟದ ಲಾರಿಗಳ ಜಿಪಿಎಸ್ ಗಳನ್ನು ಪೂರಕವಾಗಿ ಜೋಡಣೆ ಮಾಡುವುದರ ಮೂಲಕ ಅಕ್ರಮ ತಡೆಯುವಂತೆ ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದರು. ಕರಾವಳಿ ಪ್ರದೇಶಗಳ ಭೌಗೋಳಿಕ ಪ್ರದೇಶಕ್ಕನುಗುಣವಾಗಿ, ಈ ಭಾಗದ ಜಿಲ್ಲೆಗಳಿಗೆ ಅನ್ವಯವಾಗುವಂತೆ ನೂತನ ಮರಳು ನೀತಿಯನ್ನು ತರಬೇಕೆಂದು ಈ ಭಾಗದ ಶಾಸಕರು ಮನವಿ ಮಾಡಿದ್ದು, ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ನೂತನ ಮರಳು ನೀತಿಯನ್ನು ರಚಿಸಲಾಗುವುದು, ಮರಳು ಮಿತ್ರ ಆಪ್ ನಲ್ಲಿನ ಕೆಲವು ದೋಷಗಳನ್ನು ನಿವಾರಿಸಿ ಆಪ್ನ ನಿರ್ವಹಣೆಯಲ್ಲಿ ಸುಧಾರಣೆ ತರಲಾಗುವುದು ಮತ್ತು ಈ ಭಾಗದ ಸಮಸ್ಯೆಗಳ ಕುರಿತು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
"ಹೊಸ ಮರಳು ನೀತಿಯಂತೆ ಮೊದಲನೇ, ಎರಡನೇ ಮ್ತು 3ನೇ ಶ್ರೇಣಿಯಲ್ಲಿ ಗುರುತಿಸಲಾಗಿರುವ 34 ಮರಳು ನಿಕ್ಷೇಪಗಳಲ್ಲಿ ಮರಳು ತೆಗೆಯಲು ಆಶಯ ಪತ್ರ ನೀಡಿರುವ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಸ್ಥಳೀಯರ ಮತ್ತು ಸರಕಾರಿ ಯೋಜನೆಗಳ ಉಪಯೋಗಕ್ಕೆ ಮರಳು ತೆಗೆಯಲು ಅನುಮತಿ ನೀಡಬೇಕು" ಎಂದು ಸಚಿವರು ಸೂಚಿಸಿದರು.
"ಕಾರ್ಕಳ ತಾಲೂಕಿಗೆ ಬೆಳ್ತಂಗಡಿ ಮತ್ತು ಮೂಡಬಿದ್ರೆಯಿಂದ ಅಂತರಜಿಲ್ಲಾ ಮರಳು ಸಾಗಾಟದ ವಾಹನಗಳ ಓಡಾಟಕ್ಕೆ ಅನುಮತಿ ನೀಡಿದಲ್ಲಿ ತಾಲೂಕಿಗೆ ಹೆಚ್ಚಿನ ಮರಳು ಪೂರೈಕೆಯಾಗಲಿದೆ ಅಲ್ಲದೇ ತಾಲೂಕಿನಲ್ಲಿನ ಸಾಂಪ್ರದಾಯಿಕ ಕಲ್ಲಿನ ಕೆತ್ತನೆ ಕೆಲಸಗಾರರಿಗೆ ಅಗತ್ಯವಿರುವ ಕಲ್ಲುಗಳನ್ನು ಪಡೆಯಲು ತೊಂದರೆಯಾದಗAತೆ ಅಧಿಕಾರಿಗಳು ಗಮನಹರಿಸಬೇಕು, ಗ್ರಾಮೀಣ ಮಟ್ಟದಲ್ಲಿ ಮರಳು ಪಡೆಯಲು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು" ಎಂದು ಶಾಸಕ ಸುನೀಲ್ ಕುಮಾರ್ ಕೋರಿದರು.
"ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಮರಳು ಸಮಸ್ಯೆಯನ್ನು ಬಗೆಹರಿಸಿದ್ದು,ಪ್ರಸ್ತುತ ಸಿಆರ್ಝಡ್ ವ್ಯಾಪ್ತಿಯಲ್ಲಿ 8,41,710 ಮೆಟ್ರಿಕ್ ಟನ್ ಮರಳು ಗುರುತಿಸಲಾಗಿದ್ದು, ಕೆಸಿಝಡ್ಎಂಎ ಯಿಂದ 7,13,090 ಮೆ.ಟನ್ ಮರಳು ತೆಗೆಯಲು ಅನುಮತಿ ದೊರೆತಿದ್ದು, ಇದುವರೆಗೆ 3,55,000 ಮೆ.ಟನ್ ಮರಳು ತೆಗೆದು ವಿತರಿಸಲಾಗಿದೆ, ಮರಳು ತೆಗೆಯಲು 168 ಮಂದಿಗೆ ಪರವಾನಗಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾರ್ಕಳ ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ, ಉದಯ ಕೋಟ್ಯಾನ್, ಕುಂದಾಪುರ ಡಿಎಫ್ಓ ಆಶೀಶ್ ರೆಡ್ಡಿ, ಉಪ ವಿಭಾಗಾಧಿಕಾರಿ ರಾಜು, ಕಾರ್ಕಳ ತಹಸೀಲ್ದಾರ್ ಪುರಂಧರ, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೇ. ಹರ್ಷ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.