ಭುವನೇಶ್ವರ, ಜ.06 (DaijiworldNews/PY): ರೂರ್ಕೆಲಾ ಉಕ್ಕು ಕಾರ್ಖಾನೆಯಲ್ಲಿ ಬುಧವಾರ ವಿಷಾನಿಲ ಸೋರಿಕೆಯಾದ ಹಿನ್ನೆಲೆ ನಾಲ್ವರು ಕಾರ್ಮಿಕರು ಸಾವನ್ನಪ್ಪಿ, ಕೆಲವು ಮಂದಿ ಅಸ್ವಸ್ಥರಾದ ಘಟನೆ ಒಡಿಶಾದಲ್ಲಿ ನಡೆದಿದೆ.
ಮೃತ ಕಾರ್ಮಿಕರನ್ನು ಗಣೇಶಚಂದ್ರ ಪೈಲಾ (55), ರವೀಂದ್ರ ಸಾಹು (59), ಅಭಿಮನ್ಯು ಶಾ (33) ಹಾಗೂ ಬ್ರಹ್ಮಾನಂದ ಪಾಂಡಾ (51) ಎಂದು ಗುರುತಿಸಲಾಗಿದೆ.
"ಬೆಳಗಿನ ಪಾಳಿಯಲ್ಲಿ ಕಾರ್ಖಾನೆಯ ಕಲ್ಲಿದ್ದಲು ವಿಭಾಗದಲ್ಲಿ 10 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಹೊರಗುತ್ತಿಗೆಯ ಆಧಾರದ ನಾಲ್ವರು ಕಾರ್ಮಿಕರು ಸುಮಾರು 9 ಗಂಟೆಯ ವೇಳೆಗೆ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜನರಲ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಯಿತ್ತಾದರೂ ಅವುರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು" ಎಂದು ಕಾರ್ಖಾನೆಯ ಅಧಿಕಾರಿಗಳು ತಿಳಿಸಿದ್ದಾರೆ.
"ಘಟನೆಯ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ" ಎಂದು ಹೇಳಿದ್ದಾರೆ.