ಬೆಂಗಳೂರು, ಜ.06 (DaijiworldNews/PY): ಯುವರಾಜ್ ಸ್ವಾಮಿ ಅವರು ಸಿನಿಮಾ ವಿಚಾರವಾಗಿ ಸುಮಾರು 15 ಲಕ್ಷ ರೂ. ಹಣವನ್ನು ಸಂದಾಯ ಮಾಡಿದ್ದರು ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ರಾಜಕಾರಣಿಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ಯುವರಾಜ್ ಅವರಿಂದ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ ಸುಮಾರು 1.25 ಕೋಟಿ ರೂ ವರ್ಗಾವಣೆಯಾಗಿರುವ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ಬುಧವಾರ ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಯುವರಾಜ್ ಅವರು ನನ್ನ ತಂದೆಯ ಗೆಳೆಯ. ಅವರನ್ನು 17 ವರ್ಷಗಳಿಂದ ಪರಿಚಯವಿದೆ. ಸಿನಿಮಾವೊಂದರ ವಿಚಾರವಾಗಿ ನನ್ನ ಖಾತೆಗೆ ಯುವರಾಜ್ ಅವರಿಂದ ಸುಮಾರು 15 ಲಕ್ಷ ರೂ ಹಣ ಬಂದಿತ್ತು" ಎಂದು ತಿಳಿಸಿದ್ದಾರೆ.
"ಯುವರಾಜ್ ಅವರು ವೈಷ್ಣವಿ ಪ್ರೊಡಕ್ಷನ್ ಸಂಸ್ಥೆಯನ್ನು ಹೊಂದಿದ್ದಾರೆ. ಅವರು ನನ್ನ ಬಳಿ ಐತಿಹಾಸಿಕ ಸಿನಿಮಾ ಮಾಡುವ ವಿಚಾರವಾಗಿ ಚರ್ಚೆ ನಡೆಸಿದ್ದು, ನಾನೂ ಕೂಡಾ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದೆ. ಅಲ್ಲದೇ, ಅವರು 15 ಲಕ್ಷ ರೂಗಳನ್ನು ಮುಂಗಡವಾಗಿ ನನ್ನ ಖಾತೆಗೆ ಜಮೆ ಮಾಡಿದ್ದರು. ಆದರೆ, ಸಿನಿಮಾ ವಿಚಾರವಾಗಿ ಅಗ್ರಿಮೆಂಟ್ ಆಗಿರಲಿಲ್ಲ. ಈ ವಿಚಾರಕ್ಕೆ ಹಾಗೂ ನನ್ನ ಸಹೋದರ ರವಿರಾಜ್ಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದ್ದಾರೆ.
"ಯುವರಾಜ್ ಅವರು ಜ್ಯೋತಿಷಿಯಾಗಿದ್ದು, ನಮ್ಮ ಕುಟುಂಬದ ವಿಚಾರಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಹಲವು ಬಾರಿ ಅವರು ಹೇಳಿದ ರೀತಿ ನಮ್ಮ ಜೀವನದಲ್ಲಿ ನಡೆದ ಘಟನೆಗಳೂ ಇವೆ. ಅಲ್ಲದೇ, ಅವರು ನಮ್ಮ ತಂದೆಯ ಸಾವಿನ ಸೂಚನೆಯನ್ನು ಕೂಡಾ ನೀಡಿದ್ದರು. ನನಗೆ ಡಿಸೆಂಬರ್ ತಿಂಗಳಿನಲ್ಲಿ ಸಮಯ ಸೂಕ್ತವಾಗಿರುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರಿಂದ ಇಂತಹ ಸಮಸ್ಯೆ ಆಗುತ್ತದೆ ಎಂದು ನಾವು ಭಾವಿಸಿಯೇ ಇರಲಿಲ್ಲ" ಎಂದಿದ್ದಾರೆ.
"ಯುವರಾಜ್ ಅವರನ್ನು ಪೊಲೀಸರು ಬಂಧಿಸಿದಾಗ ನನಗೆ ಆಶ್ಚರ್ಯವಾಗಿತ್ತು. ಏಕೆಂದರೆ, ಅವರ ಬಂಧನವಾಗುವ ಒಂದು ವಾರದ ಹಿಂದೆ ನಾನು ಅವರೊಂದಿಗೆ ಮಾತನಾಡಿದ್ದೆ. ಸಿಸಿಬಿ ಪೊಲೀಸರು ನನ್ನ ಸಹೋದರ ರವಿರಾಜ್ ಅವರನ್ನು ವಿಚಾರಣೆ ನಡೆಸಿದೆ. ನನ್ನನ್ನೂ ಕರೆದರೆ ನಾನೂ ಕೂಡಾ ವಿಚಾರಣೆಗ ಹಾಜರಾಗಲು ಸಿದ್ದ" ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ರವಿರಾಜ್, "ರಾಧಿಕಾ ಹಣದ ವ್ಯವಹಾರದ ಬಗ್ಗೆ ನನಗೆ ತಿಳಿದಿಲ್ಲ. ಅಲ್ಲದೇ, ನಾನು ಯುವರಾಜ್ ಅವರೊಂದಿಗೆ ಯಾವುದೇ ರೀತಿಯಾದ ವ್ಯವಹಾರ ಮಾಡಿಲ್ಲ. ನನ್ನ ಖಾತೆಗೆ ಹಣ ಬಂದಿರುವ ಸುದ್ದಿ ಸುಳ್ಳು. ಸಿಸಿಬಿ ಪೊಲೀಸರು ಮಾಹಿತಿ ಪಡೆಯುವ ನಿಟ್ಟಿನಲ್ಲಿ ವಿಚಾರಣೆಗೆ ಕರೆಸಿದ್ದರು" ಎಂದು ಹೇಳಿದ್ದಾರೆ.