ಬೆಂಗಳೂರು, ಜ. 06 (DaijiworldNews/MB) : ''ನಾನು ಉತ್ತರ ಕರ್ನಾಟಕವನ್ನು ಗೌರವಿಸುತ್ತೇನೆ. ಆದರೆ ನಾನು ಮಧ್ಯಕರ್ನಾಟಕ ಭಾಗದವನು. ಹೊನ್ನಾಳಿಯವ, ಅಂಜದ ಗಂಡು'' ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಸಚಿವನಾಗಿದ್ದ ಸಂದರ್ಭ ಹಲವಾರು ಕೆಲಸ ಮಾಡಿದ್ದೇನೆ. ನಾನು ಯಾರಿಗೂ ಭಯಪಡಲ್ಲ. ಹಾಗೆಯೇ ಯಾರನ್ನೂ ಹೆದರಿಸುವುದು ಕೂಡಾ ಇಲ್ಲ'' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೆಸರನ್ನು ಉಲ್ಲೇಖಿಸದೆಯೇ ಹೇಳಿದರು.
''ಹೊನ್ನಾಳಿಯ ಹೊಡೆತ ಇಡೀ ರಾಜ್ಯಕ್ಕೆ ತಿಳಿದಿದೆ. ವರ್ಷಕ್ಕೆ ಎರಡು ಬಾರಿ ಕುಸ್ತಿ ನಡೆಯುತ್ತದೆ. ಅದೂ ದೊಡ್ಡಮಟ್ಟದಲ್ಲಿ ನಡೆಯುತ್ತದೆ'' ಎಂದರು.
''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಅವರು ಹೋರಾಟದಿಂದಲೇ ಬಂದವರು, ಈಗ ಮುಖ್ಯಮಂತ್ರಿಯಾಗಿದ್ದಾರೆ'' ಎಂದು ಬಿಎಸ್ವೈರನ್ನು ಹೊಗಳಿದ ಅವರು, ''ಹಾಗೆಂದು ನಾನು ಯಡಿಯೂರಪ್ಪ ಪರವಾಗಿ ಮಾತನಾಡುತ್ತಿಲ್ಲ'' ಎಂದು ಕೂಡಾ ಹೇಳಿದರು.
''ಹಾಗೆಯೇ ನಮ್ಮ ಪಕ್ಷದ ನಾಯಕರನ್ನು ಸಮರ್ಥನೆ ಮಾಡದೆ, ಕುಮಾರಸ್ವಾಮಿಯನ್ನು ಸಮರ್ಥನೆ ಮಾಡಲಾಗುತ್ತದೆಯೇ'' ಎಂದು ಕೇಳಿದರು.
''ಪಕ್ಷ ನಮ್ಮ ತಾಯಿಗೆ ಸಮಾನವಾದದ್ದು. ಸುಮ್ಮಸುಮ್ಮನೇ ನಾವು ಪಕ್ಷ, ನಾಯಕರ ಬಗ್ಗೆ ಮಾತನಾಡಬಾರದು'' ಎಂದು ಹೇಳಿದರು.