ಬೆಂಗಳೂರು, ಜ. 06 (DaijiworldNews/MB) : ''ನಾನು ಉತ್ತರ ಕರ್ನಾಟಕದವ, ಯಾವುದಕ್ಕೂ ಅಂಜುವ ಮಗನಲ್ಲ'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಸಿಡಿಮಿಡಿಗೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಧ್ವನಿ ಅಭಿವೃದ್ಧಿ ಪರವಾಗಿದ್ದು ಅದನ್ನು ಯಾರಿಂದಲೂ ಅದುಮಿಡಲಾಗದು. ಯಾವಾಗ ಬಾಣ ಬಿಡಬೇಕು, ಯಾವಾಗ ಸುಮ್ಮನಿರಬೇಕು ನನಗೆ ತಿಳಿದಿದೆ'' ಎಂದು ಹೇಳಿದರು.
''ಯಡಿಯೂರಪ್ಪರ ಸಭೆಯಲ್ಲಿಯೂ ಒಬ್ಬರೇ ಶಾಸಕರು ಗಲಾಟೆ ಮಾಡಿದ್ದು ಎಂದು ಗೋವಿಂದ ಕಾರಜೋಳ ಹೇಳಿದ್ದು ನಿಜ. ಶಾಸಕರ ಸಭೆಯಲ್ಲಿ ನಾನೊಬ್ಬನೇ ಗಲಾಟೆ ಮಾಡಿದ್ದು. ಉಳಿದವರ ಸುಮ್ಮನೆ ಕುಳಿತ್ತಿದ್ದರು. ನಾನು ಮಂತ್ರಿಯಾಗಬೇಕೆಂದು ಯಡಿಯೂರಪ್ಪನ ಮನೆಗೆ ಹೋಗಿಲ್ಲ. ಜನರ ಅಭಿಪ್ರಾಯ ತಿಳಿಸಲು ಹೋಗಿದ್ದೇನೆ. ಕ್ಷಮೆಯಾಚಿಸಿದ್ದೇನೆ ಎಂದು ನಾನು ಹೇಳಲ್ಲ'' ಎಂದು ಕೂಡಾ ಗುಡುಗಿದರು.
''ನಾನು ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ. ನಾನು ಜನರ ಪರವಾದ ವಿಚಾರವನ್ನೇ ಮಾತನಾಡಿದ್ದೇನೆ. ಸರ್ಕಾರ ಯಾವಾಗ ತಪ್ಪು ಮಾಡುತ್ತದೋ ಆ ಸಂದರ್ಭ ನಾನು ಎಚ್ಚರಿಕೆ ನೀಡಿದ್ದೇನೆ. ಆದರೆ ನಾನು ಪಕ್ಷ ವಿರೋಧಿ ಕಾರ್ಯ ಯಾವುದೂ ಮಾಡಿಲ್ಲ'' ಎಂದು ಹೇಳಿದರು.
''ಶಾಸಕರ ಸಭೆಯಲ್ಲಿ ನಾನು ಗಲಾಟೆ ಮಾಡಿದಾಗ ಎಲ್ಲಾ ಶಾಸಕರು ಸುಮ್ಮನಿದ್ದರು. ಅದರ ಅರ್ಥ ಅವರಿಗೂ ನನ್ನ ವಾದದ ಬಗ್ಗೆ ಸಹಮತವಿದೆಯೆಂದು ತಿಳಿಯುತ್ತೆ. ಇಲ್ಲದಿದ್ದರೆ ಅವರು ನನ್ನ ವಿರುದ್ದ ಮಾತನಾಡಬೇಕಿತ್ತು'' ಎಂದು ಹೇಳಿದರು.
ಇನ್ನು ಮಾಧ್ಯಮದ ವಿರುದ್ದವೂ ಸಿಡಿಮಿಡಿಗೊಂಡ ಯತ್ನಾಳ್, ''ಮಾಧ್ಯಮದವರಿಗೆ ಯಾರೋ ಸೂಚನೆ ನೀಡುತ್ತಾರೆ. ಬೆಳಿಗ್ಗೆ ಯತ್ನಾಳ್ ಹೇಳಿದ್ದು ಸರಿ ಅಂದವರು ಸಂಜೆ ನಾಲಿಗೆ ಹರಿಬಿಟ್ಟ ಯತ್ನಾಳ್ ಎಂದು ಸುದ್ದಿ ಮಾಡುತ್ತೀರಿ'' ಎಂದರು.