ಬದೌನ್, ಜ. 06 (DaijiworldNews/MB) : ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನೆನಪಿಸುವಂತಹ ಮತ್ತೊಂದು ಪೈಶಾಚಿಕ ಕೃತ್ಯ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಉಘೈತಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇವಾಲಿ ಗ್ರಾಮದಲ್ಲಿ ನಡೆದಿದೆ. ಮಧ್ಯವಯಸ್ಕ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್ನಿಂದ ಕ್ರೂರವಾಗಿ ಹೊಡೆದು ಮಹಿಳೆಯನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವರದಿಗಳ ಪ್ರಕಾರ ಮಹಿಳೆಯು ರವಿವಾರ ಸಂಜೆ ಸಮೀಪದ ದೇವಸ್ಥಾನವೊಂದಕ್ಕೆ ತೆರಳಿದ್ದು ಮನೆಗೆ ವಾಪಾಸ್ ಬಂದಿರಲಿಲ್ಲ. ರವಿವಾರ ರಾತ್ರಿ ಸುಮಾರು 12 ಗಂಟೆಗೆ ಮಹಿಳೆಯ ಶವವು ಮನೆಯ ಹೊರಗೆ ಆರೋಪಿಗಳು ಎಸೆದಿದ್ದಾರೆ.
ಮೃತ ಮಹಿಳೆಯ ಶವವನ್ನು ಮಹಿಳಾ ವೈದ್ಯರು ಸೇರಿದಂತೆ ಮೂವರು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಿದ್ದು ದುಷ್ಕರ್ಮಿಗಳು ಆಕೆಯ ಶ್ವಾಸಕೋಶಕ್ಕೆ ಹಾನಿ ಮಾಡಿದ್ದಾರೆ. ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದಿದೆ. ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಹಾಗೆಯೇ ಭಾರದ ವಸ್ತುವಿನಿಂದ ಮಹಿಳೆಗೆ ಹೊಡೆದಿದ್ದಾರೆ. 50 ವರ್ಷದ ಮಹಿಳೆಯು ತೀವ್ರ ರಕ್ತಸ್ರಾವ ಹಾಗೂ ತನ್ನ ಖಾಸಗಿ ಅಂಗಗಳಲ್ಲಿ ತೀವ್ರವಾದ ಗಾಯಗಳಿಂದ ಮೃತಪಟ್ಟಿದ್ದಾಳೆ ಎಂದು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬದೌನ್ ಎಸ್ಎಸ್ಪಿ ಸಂಕಲ್ಪ ಶರ್ಮಾ ಅವರು ಆರೋಪಿಗಳ ಶೋಧಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಂತ್ ಬಾಬಾನ ಶಿಷ್ಯ ವೇದಾರಾಮ್ ಮತ್ತು ಚಾಲಕ ಜಸ್ಪಾಲ್ನನ್ನು ಬಂಧಿಸಲಾಗಿದೆ. ಆರೋಪಿ ಮಹಂತ್ ಬಾಬಾ ಸತ್ಯನಾರಾಯಣನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.