ಶ್ರೀನಗರ, ಜ.06 (DaijiworldNews/PY): ಸತತ ನಾಲ್ಕನೇ ದಿನವೂ ಕೂಡಾ ಜಮ್ಮು-ಕಾಶ್ಮೀರದಲ್ಲಿ ಹಿಮಪಾತವಾಗಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಿಮಾನ ಸಂಚಾರವನ್ನೂ ಕೂಡಾ ಸ್ಥಗಿತಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, "ರವಿವಾರದಿಂದ ಜಮ್ಮು-ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದೆ. ಆದರೆ, ಬುಧವಾರ ಹವಾಮಾನದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ" ಎಂದು ಹೇಳಿದೆ.
"ನಗರದ ಹಲವು ಕಡೆಗಳಲ್ಲಿ ಭಾರೀ ಹಿಮಪಾತ ಹಾಗೂ ಭೂ ಕುಸಿತ ಸಂಭವಿಸಿದ ಕಾರಣ ಜಮ್ಮು ಹಾಗೂ ಶ್ರೀನಗರ ಹೆದ್ದಾರಿಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಲ್ಲ" ಎಂದು ಸಂಚಾರ ನಿಯಂತ್ರ ಕೊಠಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಹಿಮಪಾತವಾದ ಕಾರಣ ಜವಾಹರ್ ಸುರಂಗ ಸೇರಿ ಅನೇಕ ಪ್ರದೇಶಗಳು ಹಿಮದಿಂದ ತುಂಬಿಹೋಗಿವೆ. ನಗರ ಕೆಲವು ಪ್ರದೇಶಗಳಾದ ಮಾರೊಗ್, ಧಲ್ವಾಸ್, ಸಮ್ರೋಲಿ, ಕೆಫೆಟೇರಿಯಾ ಮೊರ್, ನಶ್ರಿ, ಮಾಗರ್ಕೋಟ್ ಹಾಗೂ ಪಂಥ್ಯಾಲ್ಗಳಲ್ಲಿ ಭೂ ಕುಸಿತ ಉಂಟಾಗಿದೆ. ಅಲ್ಲದೇ, ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಹಿಮಪಾತದ ಕಾರಣ ಶ್ರೀನಗರ ವಿಮಾನ ನಿಲ್ದಾಣಲ್ಲಿ ವಾಯುಮಾರ್ಗವು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಈ ಹಿನ್ನೆಲೆ ಸತತ ನಾಲ್ಕನೇ ಬಾರಿಗೆ ವಿಮಾನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ" ಎಂದಿದ್ದಾರೆ.