ಪಣಜಿ, ಜ.06 (DaijiworldNews/PY): "ಐತಿಹಾಸಿಕ ಅಗುವಾಡ ಜೈಲನ್ನು ಪ್ರವಾಸಿತಾಣವನ್ನಾಗಿ ನವೀಕರಿಸಲಾಗುವುದು, ಮಾರ್ಚ್ನಲ್ಲಿ ಇದರ ಅಭಿವೃದ್ದಿ ಕಾರ್ಯ ಸಂಪೂರ್ಣವಾಗಲಿದೆ" ಎಂದು ಗೋವಾ ಸಿಎಂ ಪ್ರಮೋದ್ ಸಾರ್ವತ್ ಹೇಳಿದರು.
ಅಗುವಾಡ ಜೈಲಿನ ನವೀಕರಣಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, "ಐತಿಹಾಸಿಕ ಅಗುವಾಡ ಜೈಲನ್ನು ಪ್ರವಾಸಿತಾಣವನ್ನಾಗಿಸುವ ಯೋಜನೆಯ ಶೇ. 90ರಷ್ಟು ಕಾರ್ಯಗಳು ಪೂರ್ತಿಯಾಗಿವೆ. ಇದನ್ನು ಪ್ರವಾಸಿಗರಿಗಾಗಿ ತೆರೆಯಲಾಗುವುದು" ಎಂದಿದ್ದಾರೆ.
"ಜೈಲಿನಲ್ಲಿರುವ ಎರಡು ಮುಖ್ಯವಾದ ಕೋಣೆಗಳನ್ನು ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಬಿ.ಕುನ್ಹಾ ಹಾಗೂ ರಾಮ್ ಮನೋಹರ್ ಲೋಹಿಯಾ ಅವರಿಗೆ ಸಮರ್ಪಿಸಲಾಗುವುದು. ರಾಜ್ಯದ ವಿಮೋಚನಾ ಹೋರಾಟದ ಕುರಿತಾದ ವಸ್ತುಸಂಗ್ರಹಾಲಯವನ್ನಾಗಿ ಅಗುವಾಡ ಕೋಟೆಯನ್ನು ಮಾರ್ಪಾಡು ಮಾಡಲಾಗುವುದು" ಎಂದು ತಿಳಿಸಿದ್ದಾರೆ.
"ಅಗುವಾಡ ಕೋಟೆಯನ್ನು, ಕೇಂದ್ರ ಸರ್ಕಾರದ ಸ್ವದೇಶ ದರ್ಶನ ಯೋಜನೆ ಅಡಿಯಲ್ಲಿ ಅಂದಾಜು 22 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ" ಎಂದು ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಾಹಿತಿ ನೀಡಿದೆ.