ಭೋಪಾಲ್, ಜ. 06 (DaijiworldNews/MB) : ಒಂದು ವಿಚಿತ್ರ ಪ್ರಕರಣದಲ್ಲಿ, ಪತ್ನಿಯು ಪತಿಯ ಪ್ರೇಯಸಿಯಿಂದ 1.5 ಕೋಟಿ ರೂ. ಪಡೆದು ತನ್ನ ಪತಿಯನ್ನು ಆತನ ಪ್ರೇಯಸಿ ವಿವಾಹವಾಗಲು ಒಪ್ಪಿಗೆ ಸೂಚಿಸಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ವರದಿಯಾಗಿದೆ.
ಈ ವಿಷಯವು ಮೊದಲು ಭೋಪಾಲ್ನ ಕುಟುಂಬ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂದೆಗೆ ಸಹೋದ್ಯೋಗಿಯೊಂದಿಗೆ ಸಂಬಂಧವಿದೆ ಎಂದು ಹೇಳಿಕೊಂಡಿದ್ದಳು. ಹಾಗೆಯೇ ಈ ಸಂಬಂಧದ ವಿಚಾರದಲ್ಲಿ ಮನೆಯಲ್ಲಿ ವಾದ ನಡೆಯುತ್ತಿದ್ದು ಇದು ನನ್ನ ಹಾಗೂ ನನ್ನ ಸಹೋದರಿಯ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಳು.
ಅಪ್ರಾಪ್ತ ವಯಸ್ಕರ ದೂರಿನ ಆಧಾರದ ಮೇಲೆ ದಂಪತಿಗಳನ್ನು ಕೌನ್ಸೆಲಿಂಗ್ಗೆ ಕರೆಸಲಾಗಿತ್ತು. ಹೆಚ್ಚಿನ ತನಿಖೆಯಲ್ಲಿ, ಪತಿ ತನಗಿಂತ ಹೆಚ್ಚು ವಯಸ್ಕರಾದ ತನ್ನ ಕಚೇರಿಯಲ್ಲಿ ಉದ್ಯೋಗ ಮಾಡುವ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು ಎಂದು ತಿಳಿದುಬಂದಿದೆ. ಹಾಗೆಯೇ ಆತನು ತನ್ನ ಪತ್ನಿಯಿಂದ ವಿಚ್ಛೇಧನ ಪಡೆದು ತನ್ನ ಪ್ರೇಯಸಿಯೊಂದಿಗೆ ವಾಸಿಸಲು ಬಯಸಿದ್ದನು. ಆದರೆ ಪತ್ನಿಯು ವಿಚ್ಛೇಧನ ನೀಡಲು ನಿರಾಕರಿಸಿದಳು. ಅನೇಕ ಬಾರಿ ಸಮಾಲೋಚನೆ ನಡೆಸಿದ ಬಳಿಕ ಈ ದಂಪತಿಗಳು ಒಂದು ಅಂತಿಮ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.
ತಾನು ಸಂಬಂಧ ಹೊಂದಿದ್ದ ಮಹಿಳೆಯು ತನ್ನ ಅಪಾರ್ಟ್ಮೆಂಟ್ ಹಾಗೂ 27 ಲಕ್ಷ ರೂ. ಹಸ್ತಾಂತರಿಸಲು ಒಪ್ಪಿದ ಬಳಿಕ ತನ್ನ ಪತಿಯನ್ನು ಬಿಡಲು ಪತ್ನಿಯು ಒಪ್ಪಿಕೊಂಡಳು. ಇನ್ನು ಕೌನ್ಸಿಲರ್ಗೆ ಮಹಿಳೆಯು ಉತ್ತಮ ಸಂಬಂಧ ಹೊಂದಿರದ ಯಾರೊಂದಿಗೂ ನಾನು ಜೀವಿಸಲು ಅಪೇಕ್ಷಿಸುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ. ಬದಲಾಗಿ ತಾನು ಪತಿಯನ್ನು ಬಿಡುತ್ತೇನೆ ಎಂದು ಹೇಳಿದ ಆಕೆ, ತನ್ನ ಹೆಣ್ಣುಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಕೂಡಾ ತಿಳಿಸಿದ್ದಾಳೆ.
ಕೆಲವು ದಿನಗಳ ಹಿಂದೆ ಮೆಕ್ಸಿಕೊದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದೆ. ಒಬ್ಬ ವ್ಯಕ್ತಿಯು ತನ್ನ ಪತ್ನಿಗೆ ಮೋಸ ಮಾಡಿ ತನ್ನ ಮನೆಯಿಂದ ತನ್ನ ಪ್ರೇಯಸಿಯ ಮನೆಗೆ ಸುರಂಗವನ್ನು ನಿರ್ಮಿಸಿದ್ದ. ತನ್ನ ಪ್ರೇಯಸಿಗೂ ಮೋಸ ಮಾಡಿದ್ದ. ಪತ್ನಿಯು ತನ್ನ ಮನೆಯ ಮಂಚದ ಕೆಳಗೆ ಇರುವ ರಹಸ್ಯ ಸುರಂಗವನ್ನು ಪತ್ತೆ ಹಚ್ಚಿದಾಗ ವಿಚಾರ ಬೆಳಕಿಗೆ ಬಂದಿದೆ.