ನವದೆಹಲಿ, ಜ.06 (DaijiworldNews/PY): ಇಡೀ ದೇಶವೇ ಕೊರೊನಾ ಸಾಂಕ್ರಾಮಿಕ ವಿರುದ್ದ ಹೋರಾಡುತ್ತಿರುವ ನಡುವೆಯೇ, ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಿಸಿದೆ. ಈಗಾಗಲೇ ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸಾವಿರಾರು ಹಕ್ಕಿಗಳು ಸಾವನ್ನಪ್ಪಿವೆ.
ಈ ಬಗ್ಗೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿದ್ದು, ಕೊರೊನಾ ಸೋಂಕಿನಿಂದ ಭಯಭೀತರಾಗಿರುವ ಜನರು, ಪಕ್ಷಿ ಜ್ವರವು ಸಾಂಕ್ರಾಮಿಕ ರೋಗವಾಗಿ ಪರಿಣಮಿಸಬಹುದು ಎನ್ನುವ ಭಯದಲ್ಲಿದ್ದಾರೆ. ಅದಾಗಿಯೂ, ಆರೋಗ್ಯ ತಜ್ಞರು ಅಂತಹ ಸಾಧ್ಯತೆಯನ್ನು ನಿರಾಕರಿಸಿದ್ದು, ಈ ಬಗ್ಗೆ ಭಯಪಡಬೇಡಿ, ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
"ಸೋಂಕಿತ ಜಾತಿಯ ಪಕ್ಷಿಗಳ ಸಾಮೀಪ್ಯದಲ್ಲಿ ಕೆಲಸ ಮಾಡದ ಹೊರತು ಪಕ್ಷಿ ಜ್ವರಕ್ಕೆ ಕಾರಣವಾಗುವ ಹೆಚ್5ಎನ್1 ವೈರಸ್ ಮಾನವನಿಂದ ಮನುಷ್ಯನಿಗೆ ಹರಡುವ ಅಪಾಯ ಬಹಳ ವಿರಳ" ಎಂದು ವೈದ್ಯರು ಹೇಳಿದ್ದಾರೆ.
"ಕೋಳಿ ಮಾಂಸ ಮಾರಾಟ ಕೇಂದ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಈ ಸೋಂಕಿನಿಂದ ಅಪಾಯವಾಗಬಹುದು. ಇಲ್ಲದಿದ್ದರೆ, ಮಾನವನಿಂದ ಮಾನವನಿಗೆ ಹೆಚ್5ಎನ್1 ವೈರಸ್ ಹರಡುವುದು ಬಹಳ ಅಪರೂಪ. ಆದ್ದರಿಂದ ಭಯಪಡುವ ಅಗತ್ಯವಿಲ್ಲ" ಎಂದು ಏಮ್ಸ್ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಹರ್ಷಲ್ ಆರ್. ಸಾಲ್ವೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
"ಹಕ್ಕಿ ಜ್ವರ ಮಾನವನಿಂದ ಮಾನವನಿಗೆ ಹರಡುವುದು ಬಹಳ ಅಸಾಮಾನ್ಯವಾಗಿದೆ" ಎಂದು ಡಾ.ಉಪಾಲಿ ನಂದಾ ಹೇಳಿದ್ದಾರೆ.
ಏತನ್ಮಧ್ಯೆ, "ಸಾರ್ವಜನಿಕರು ಮೊಟ್ಟೆ ಹಾಗೂ ಕೋಳಿ ಮಾಂಸ ಸೇವನೆ ಮಾಡಿದ್ದಲ್ಲಿ ಎಚ್5ಎನ್1 ವೈರಸ್ ತಗುಲಬಹುದು. ಹಕ್ಕಿ ಜ್ವರವು ಹರಡುವಿಕೆ ಹಾಗೂ ಮೊಟ್ಟೆಗಳ ಸೇವನೆಯ ನಡುವೆ ಯಾವುದೇ ಸಂಬಂಧವಿಲ್ಲದಿದ್ದರೂ, ಅರೆಬೆಂದ, ಮೊಟ್ಟೆ ಹಾಗೂ ಮಾಂಸ ಸೇವನೆ ಮಾಡಬಾರದು" ಎಂದು ಸೂಚನೆ ನೀಡಿದ್ದಾರೆ.
"ಮಾಂಸ ಅಥವಾ ಮೊಟ್ಟೆಗಳನ್ನು ತಿನ್ನುವ ಮೂಲಕ ಪಕ್ಷಿ ಜ್ವರ ಹರಡುವುದನ್ನು ಸೂಚಿಸುವ ಯಾವುದೇ ಪುರಾವೆಗಳು ಲಭ್ಯವಿಲ್ಲ. ಅದೇನೆ ಇದ್ದರೂ ಕೂಡಾ, ಪೀಡಿತ ಪ್ರದೇಶದಲ್ಲಿ ಮಾಂಸ ಹಾಗೂ ಮೊಟ್ಟೆ ಸೇವನೆಯನ್ನು ತಿನ್ನುವುದನ್ನು ತಪ್ಪಿಸಬೇಕು" ಎಂದು ಡಾ.ಸಾಲ್ವೆ ಸಲಹೆ ನೀಡಿದ್ದಾರೆ.
"ಅರೆಬೆಂದ ಮಾಂಸ ಹಾಗೂ ಮೊಟ್ಟೆಗಳನ್ನು ಸೇವಿಸಬಾರದು. ಇದರೊಂದಿಗೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ನಿಮ್ಮ ಕೈಗಳನ್ನು ಬೆಚ್ಚಗಿನ ನೀರು ಹಾಗೂ ಸಾಬೂನಿನಿಂದ ತೊಳೆಯಬೇಕು. ಮಾಂಸವನ್ನು ಬೇಯಿಸಲು ಬೇರೆ ಪಾತ್ರಗಳನ್ನು ಬಳಸಬೇಕು. ಮಾಂಸ ಸರಿಯಾಗಿ ಬೇಯಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು" ಎಂದು ಡಾ. ನಂದಾ ಸಲಹೆ ನೀಡಿದ್ದಾರೆ.
"ಸದ್ಯಕ್ಕೆ ನೇರ ಪ್ರಾಣಿ ಅಥವಾ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಮಾಸ್ಕ್ ಧರಿಸಿ. ಪಕ್ಷಿ ಹಿಕ್ಕೆಗಳನ್ನು ಅಥವಾ ಅನಾರೋಗ್ಯ ಹಾಗೂ ಸತ್ತ ಪಕ್ಷಿಗಳನ್ನು ಮುಟ್ಟಬೇಡಿ" ಎಂದು ಹೇಳಿದ್ದಾರೆ.
ಕೋಳಿಗಳಲ್ಲಿ ಇನ್ನೂ ಕೂಡಾ ಪಕ್ಷಿ ಜ್ವರ ಪತ್ತೆಯಾಗಿಲ್ಲ. ರೋಗಗಳ ಪತ್ತೆಗಾಗಿ ಕಳುಹಿಸಲಾದ ಮಾದರಿಗಳಲ್ಲಿ ಕೋಳಿಗಳಲ್ಲಿ ಹೆಚ್5ಎನ್1 ವೈರಸ್ ಇರುವುದು ಪತ್ತೆಯಾಗಿಲ್ಲ ಎನ್ನಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಅತಿದೊಡ್ಡ ಕೋಳಿ ಮಾರುಕಟ್ಟೆಯಾದ ಗಾಜಿಪುರ ಮಂಡಿಯ ಅಧ್ಯಕ್ಷ ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದು, "ಕೋಳಿ ಮಾಂಸದಲ್ಲಿ ಪಕ್ಷಿ ಜ್ವರ ಕಂಡು ಬಂದಿರುವ ಬಗ್ಗೆ ಇನ್ನೂ ಮಾರುಕಟ್ಟೆಯಲ್ಲಿ ವರದಿಯಾಗಿಲ್ಲ" ಎಂದು ತಿಳಿಸಿದ್ದಾರೆ.