ಬೆಂಗಳೂರು, ಜ. 06 (DaijiworldNews/MB) : ಕೊರೊನಾ ಸಂದರ್ಭದಲ್ಲಿ "ಶಾಲೆಗಳಲ್ಲಿ ಪೂರ್ತಿ ಶುಲ್ಕ ಕಟ್ಟಿ ಎಂದು ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ. ಈ ವರ್ಷದ ಖರ್ಚು ವೆಚ್ಚದ ಆಧಾರದಲ್ಲಿ ಶುಲ್ಕ ನಿಗದಿ ಮಾಡಿ. ಬಲವಂತವಾಗಿ ಶುಲ್ಕ ಪಾವತಿ ಮಾಡಿ ಎನ್ನುವುದು ಸರಿಯಲ್ಲ" ಎಂಬ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತಮಂಡಳಿ ಒಕ್ಕೂಟ (ಕೆಎಎಂಸಿ) ತನ್ನ ವ್ಯಾಪ್ತಿಯ ಸಂಸ್ಥೆಗಳಿಗೆ ಮನವಿ ಮಾಡಿರುವುದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದಿರುವ ಅವರು, ''ರಾಜ್ಯದ ಖಾಸಗಿ ಶಾಲೆಗಳಲ್ಲಿ ಪೋಷಕರು ಮತ್ತು ಶಾಲಾ ವ್ಯವಸ್ಥಾಪಕ ಮಂಡಳಿ ನಡುವೆ ಈ ಕೊರೊನಾ ವರ್ಷದಲ್ಲಿ ಶಾಲಾ ಶುಲ್ಕ ಕುರಿತು ತೀವ್ರ ವಾಗ್ವಾದ/ಸಂಘರ್ಷ ನಡೆದಿದೆ. ಈ ವರ್ಷ ಬಹಳಷ್ಟು ಕಾಲ ಶಾಲೆಗಳು ನಡೆಯದೇ ಇರುವುದರಿಂದ ಹಾಗೂ ಈ ಕೊರೊನಾ ಕಾರಣ ತಮ್ಮ ಸಂಪಾದನೆ ಇಳಿಮುಖವಾಗಿರುವುದರಿಂದ ತಮಗೆ ಎಂದಿನಂತೆ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂಬುದು ಪೋಷಕರ ನ್ಯಾಯಯುತ ಅಳಲು'' ಎಂದು ಹೇಳಿದ್ದಾರೆ.
''ಆದರೆ ಪೋಷಕರು ಶುಲ್ಕ ಕಟ್ಟದಿದ್ದರೆ ನಾವು ನಮ್ಮ ಶಾಲೆಗಳ ಶಿಕ್ಷಕರಿಗೆ ವೇತನ ಕೊಡುವುದು ಹೇಗೆ ಎಂಬುದು ಖಾಸಗಿ ಶಾಲೆಗಳ ಪ್ರಶ್ನೆ. ವಿಶೇಷವಾಗಿ ಬಜೆಟ್ ಶಾಲೆಗಳು ಎಂದು ಕರೆಯಲ್ಪಡುವ ಮಧ್ಯಮವರ್ಗದ ಶಾಲೆಗಳಲ್ಲಿ ಅನೇಕ ಶಿಕ್ಷಕರು ಇಂದು ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಅಥವಾ ಅವರ ಸಂಬಳ ಕಡಿತಗೊಂಡಿದೆ. ಇವರಲ್ಲಿ ಅನೇಕರು ಇಂದು ತರಕಾರಿ ಮಾರುವುದರಿಂದ ಹಿಡಿದು ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಇದು ಸರಿಯಲ್ಲ'' ಎಂದು ಕೂಡಾ ಹೇಳಿದ್ದಾರೆ.
''ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಪೂರ್ತಿ ಶುಲ್ಕ ಕಟ್ಟಿ ಎಂದು ಒತ್ತಡ ಹೇರುವುದು ಸರಿಯಲ್ಲ. ಈ ವರ್ಷದ ಖರ್ಚುವೆಚ್ಚದ ಆಧಾರದ ಮೇಲೆ ಶುಲ್ಕ ನಿಗದಿ ಮಾಡಿ. ಬಲವಂತವಾಗಿ ಶುಲ್ಕ ಪಾವತಿ ಮಾಡಿ ಎನ್ನುವುದು ಸರಿಯಲ್ಲ ಎಂಬ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕೆಎಎಂಸಿ) ತನ್ನ ವ್ಯಾಪ್ತಿಯ ಸಂಸ್ಥೆಗಳಿಗೆ ಮನವಿ ಮಾಡಿರುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ವರ್ಷ ಅನೇಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಪಠ್ಯಕ್ರಮ ಅಥವಾ ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ನಿಗದಿ ಪಡಿಸಿದ್ದರೆ ಅದನ್ನು ಕೈಬಿಡಬೇಕು. ಮೊದಲಿನಂತೆ ಸಂಪೂರ್ಣವಾಗಿ ಶುಲ್ಕ ಪಡೆಯುವುದು ಬೇಡ. ಪಾಲಕ-ಪೋಷಕರು ಒಂದಿಗೆ ಚರ್ಚೆ ನಡೆಸಿ ಶುಲ್ಕ ರಿಯಾಯಿತಿ ನೀಡಿದರೆ ಪಾಲಕ-ಪೋಷಕರು ಖಂಡಿತವಾಗಿಯೂ ಶುಲ್ಕ ಪಾವತಿ ಮಾಡುತ್ತಾರೆ ಎಂಬ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ರವರ ಹೇಳಿಕೆ ಅತ್ಯಂತ ಆರೋಗ್ಯಕರ. ಎಲ್ಲಾ ಶಾಲೆಗಳು ತಮ್ಮ ಶಾಲೆಗಳ ಮಕ್ಕಳ ಪೋಷಕರ ಆರ್ಥಿಕ ಸ್ಥಿತಿಯನ್ನು ಅರಿಯಬೇಕು. ಅದೇ ರೀತಿ ಆರ್ಥಿಕವಾಗಿ ಸಬಲರಾಗಿರುವ ಪೋಷಕರು ತಮ್ಮ ಮಕ್ಕಳು ಓದುತ್ತಿರುವ ಶಾಲೆಗಳ ಶಿಕ್ಷಕರ ಜೀವನ ನಿರ್ವಹಣೆ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಬೇಕು'' ಎಂದು ತಿಳಿಸಿದ್ದಾರೆ.