ಉಳ್ಳಾಲ, ಜ. 06 (DaijiworldNews/MB) : ''ಈ ವರ್ಷ ಸಂಘಟನೆ ಮತ್ತು, ಹೋರಾಟದ ವರ್ಷ ಎಂದು ಕೆಪಿಸಿಸಿ ಘೋಷಿಸಲಾಗಿದ್ದು, ಕ್ಷೇತ್ರಮಟ್ಟದ ಸಮಸ್ಯೆ ಮುಂದಿಟ್ಟಕೊಂಡು ಹೋರಾಟ ನಡೆಸಲಾಗುವುದು. ಪಕ್ಷದ ಅಭ್ಯರ್ಥಿಗಳು ಸೋತಿರುವ 100 ರಿಂದ150 ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿಯಲು ನಿರ್ಧರಿಸಲಾಗಿದೆ. ಅದರಂತೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಧ್ವನಿ ಆದರೆ, ಕೆಪಿಸಿಸಿ ಬ್ಲಾಕ್ ಕಾಂಗ್ರೆಸ್ ಧ್ವನಿ ಆಗಲಿದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳೂರು ವಿದಾನಸಭಾ ಕ್ಷೇತ್ರ ಕಾರ್ಯಕರ್ತರಿಗೆ ಅಂಬ್ಲಮೊಗರುವಿನಲ್ಲಿ ಮಂಗಳವಾರ ನಡೆದ ಕೃತಜ್ಞತಾ ಮತ್ತು ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
''ನೀವು ಬಿಜೆಪಿಗೆ ಮತ ಹಾಕಿದ್ದೀರಿ, ಆದರೆ ಅವರು ಏನು ಮಾಡಿದ್ದಾರೆ'' ಎಂದು ಜನತೆಗೆ ಪ್ರಶ್ನಿಸಿದ ಅವರು, ''ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಮತ ನೀಡಿ ಇಷ್ಟು ಶಾಸಕರನ್ನು ಆರಿಸಿದರೂ ನಿಮಗಾದ ಪ್ರಯೋಜನ ಏನು ಎಂದು ಇಲ್ಲಿನವರೇ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಅವರನ್ನು ಪ್ರಶ್ನಿಸಬೇಕು. ಕೊರೊನಾ ಸಂಕಷ್ಟ ಗಮನದಲ್ಲಿಟ್ಟುಕೊಂಡು ಎಲ್ಲ ರೀತಿಯ ತೆರಿಗೆ ಮನ್ನಾ ಮಾಡಬೇಕು'' ಎಂದು ಆಗ್ರಹಿಸಿದರು.
''ಜಾತಿ, ಧರ್ಮದ ಆಧಾರದಲ್ಲಿ ಪಕ್ಷ ಮುನ್ನಡೆಸಲು ಸಾಧ್ಯವಿಲ್ಲ. ನಮ್ಮ ಬೆವರು, ರಕ್ತ ಒಂದೇ ಆಗಿದ್ದು ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಯಾರೊಬ್ಬರೂ ಜಾತಿಯ ಅರ್ಜಿ ಹಾಕಿ ಹುಟ್ಟಿಲ್ಲ. ಆದರೂ ಬಿಜೆಪಿ ಜಾತಿ, ದರ್ಮದ ಆಧಾರದಲ್ಲಿ ನಡೆಯುತ್ತಿದ್ದರೆ, ಕಾಂಗ್ರೆಸ್ ನಾವೆಲ್ಲ ಒಂದೂ ಎನ್ನುವ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ. ಮುಖ್ಯಮಂತ್ರಿ ಯಾರು ಬೇಕಾದರೂ ಆಗಲಿ, ವಿದಾನಸೌಧದಲ್ಲಿ ಕಾಂಗ್ರೆಸ್ ಧ್ವಜ ಹಾರಿದರೆ ಸಾಕು'' ಎಂದು ಹೇಳಿದರು.
ಈ ಸಂದರ್ಭ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಶಕುಂತಲಾ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಜಿಲ್ಲಾ ವಕ್ಫ್ ಅಧ್ಯಕ್ಷ ಯು.ಕೆ.ಮೋನು, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪುಷ್ಪ ಅಮರ್ ನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಇನ್ನಿತರರು ಉಪಸ್ಥಿತರಿದ್ದರು.
ಶಾಸಕ ಯು.ಟಿ.ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಶೆಟ್ಟಿ ಸ್ವಾಗತಿಸಿದರು.