ಬೆಂಗಳೂರು, ಜ. 06 (DaijiworldNews/MB) : ''ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಲೋಕರ್ಪಣೆಗೊಳಿಸಿದ 444 ಕಿ.ಮೀ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್, ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೈಗಾರಿಕಾ, ವಾಣಿಜ್ಯ ಘಟಕಗಳು ಮತ್ತು ಮನೆಗಳಿಗೆ ಅನುಕೂಲವಾಗಲಿದೆ'' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
''ನೈಸರ್ಗಿಕ ಅನಿಲ ಆರ್ಥಿಕ, ಪರಿಸರ ಸ್ನೇಹಿ ಮತ್ತು ಬಳಕೆಗೆ ಶುದ್ಧ ಇಂಧನವಾಗಿರುವುದರಿಂದ ಈ ಪೈಪ್ಲೈನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ನೂರಾರು ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ಅನುಕೂಲವಾಗಲಿದೆ'' ಎಂದು ಅವರು ಹೇಳಿದ್ದಾರೆ.
''ನೈಸರ್ಗಿಕ ಅನಿಲವು ರಾಜ್ಯದಾದ್ಯಂತ ವಿದ್ಯುತ್ ಮತ್ತು ರಸಗೊಬ್ಬರ ಘಟಕಗಳಿಂದ ಪರಿಸರ ಸ್ನೇಹಿ ಇಂಧನಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ. ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ನೂರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ'' ಎಂದು ಕೂಡಾ ಹೇಳಿದರು.
450 ಕಿ.ಮೀ. ಉದ್ದದ ಈ ಕೊಳವೆ ಮಾರ್ಗವನ್ನು ಜಿ.ಎ.ಐ.ಎಲ್. (ಇಂಡಿಯಾ) ಲಿ., ನಿರ್ಮಿಸಿದೆ. ಇದು ಪ್ರತಿನಿತ್ಯ 12 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇರಳದ ಕೊಚ್ಚಿಯ ಧ್ರವೀಕೃತ ನೈಸರ್ಗಿಕ ಅನಿಲ (ಎನ್.ಎನ್.ಜಿ) ಮರುಹೊಂದಾಣಿಕೆ ಟರ್ಮಿನಲ್ ನಿಂದ ಎರ್ನಾಕುಲಂ, ತ್ರಿಸ್ಸೂರ್, ಪಾಲಕ್ಕಾಡ್, ಮಲ್ಲಪುರಂ, ಕೋಳಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ಮೂಲಕ ಹಾದು ಕರ್ನಾಟಕದ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುತ್ತದೆ.