ಬೆಂಗಳೂರು, ಜ 05 (DaijiworldNews/SM): ರಾಜ್ಯ ಬಿಜೆಪಿ ಸರ್ಕಾರದ ಬಹು ನಿರೀಕ್ಷಿತ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಸಹಿ ಹಾಕಿದ್ದು, ಆ ಮೂಲಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದಂತಾಗಿದೆ.
"ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಅನ್ನು ವಿಧಾನಸಭೆಯಲ್ಲಿ ಮಂಡಿಸಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಅಂಗೀಕಾರ ಪಡೆದುಕೊಂಡಿತ್ತು. ಆದರೆ ಬಿಜೆಪಿ ಸರ್ಕಾರಕ್ಕೆ ವಿಧಾನ ಪರಿಷತ್ನಲ್ಲಿ ಬಹುಮತ ಇಲ್ಲದ ಕಾರಣ ಪರಿಷತ್ನಲ್ಲಿ ವಿಧೇಯಕ ಮಂಡನೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೊರೆ ಹೋಗುವ ಅನಿವಾರ್ಯತೆ ಸರಕಾರಕ್ಕಿತ್ತು. ಇದೀಗ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಅದಕ್ಕೆ ಇಂದು ರಾಜ್ಯಪಾಲರಿಂದ ಅಂಕಿತವನ್ನು ಪಡೆದುಕೊಳ್ಳುವಲ್ಲಿ ಸರಕಾರ ಸಫಲವಾಗಿದೆ.
ಸುಗ್ರೀವಾಜ್ಞೆಯ ಪ್ರಕಾರ ರಾಜ್ಯದಲ್ಲಿ ಜಾನುವಾರು ಸಾಗಾಣಿಕೆ, ಹತ್ಯೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ, ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಮೇಲೆ ಸಹ ನಿರ್ಬಂಧ ವಿಧಿಸಲಾಗಿದೆ.
ಒಂದು ವೇಳೆ, ಹತ್ಯೆಗಾಗಿ ಮಾರಾಟ ಮಾಡಿದ್ದಲ್ಲಿ ಆ ಜಾನುವಾರುಗಳನ್ನು ಜಪ್ತಿ ಮಾಡಲು ಕಾನೂನಿನಡಿಯಲ್ಲಿ ಅವಕಾಶವಿದೆ. ನಿಯಮ ಉಲ್ಲಂಘಿಸಿದವರಿಗೆ ಮೂರು ವರ್ಷದಿಂದ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಲ್ಲದೆ 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಕೂಡ ಕಾನೂನಿನಲ್ಲಿ ಅವಕಾಶವಿದೆ.