ಬೆಂಗಳೂರು, ಜ 05 (DaijiworldNews/SM): ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ಯಡಿಯೂರಪ್ಪನವರಿಗೆ ಭಾರೀ ಹಿನ್ನಡೆ ಉಂಟಾದಂತಾಗಿದೆ.
ಜಯಕುಮಾರ್ ಹಿರೇಮಠ್ ಎಂಬುವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ನಡುವೆ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ಕಾಯ್ದಿರಿಸಲಾಗಿದೆ. ಈ ನಡುವೆ ಇಂದು ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರಿದ್ದ ನ್ಯಾಯಪೀಠ ತೀರ್ಪು ಪ್ರಕಟಿಸಿದೆ. ಅಲ್ಲದೆ, ದೂರಿನ ಸಂಬಂಧ ತನಿಖೆ ಮುಂದುವರಿಸುವಂತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ.
ಯಡಿಯೂರಪ್ಪ ಅವರು 2015ರಲ್ಲಿ ಆರ್.ಟಿ.ನಗರದ ಗಂಗೇನಹಳ್ಳಿ ವ್ಯಾಪ್ತಿಯ ಮಠದ ಹಳ್ಳಿ ಬಡಾವಣೆಯಲ್ಲಿ 1.1 ಎಕರೆ ಭೂಮಿಯನ್ನು ತಮ್ಮ ಅಧಿಕಾರ ಬಳಸಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಲು ಆದೇಶ ನೀಡಿದ್ದಾರೆ ಎಂದು ಆರೋಪಿಸಿ ಜಯಕುಮಾರ್ ಹಿರೇಮಠ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.