ನವದೆಹಲಿ, ಜ 05 (DaijiworldNews/SM): ಕೊರೋನಾ ಸೋಂಕು ಹೊಸ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ವ್ಯಾಕ್ಸಿನ್ ಬಳಕೆಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಲಾಗಿದೆ. ಈ ನಡುವೆ ಜನವರಿ 13ರೊಳಗೆ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಪ್ರಾರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆ ಬಳಿಕ ದೇಶದಲ್ಲಿ ಸಾಮೂಹಿಕ ವ್ಯಾಕ್ಸಿನೇಷನ್ ಗೆ ಚಾಲನೆ ಸಿಗಲಿದೆ.
ಎರಡು ಲಸಿಕೆಗಳ ಬಳಕೆಗೆ ಜನವರಿ ಮೂರರಂದು ಅನುಮೋದನೆ ನೀಡಲಾಗಿದೆ. ಡ್ರೈ ರನ್ ಹಂತದಲ್ಲಿನ ಪ್ರತಿಕ್ರಿಯೆ ಆಧಾರದ ಮೇಲೆ 10 ದಿನಗಳೊಳಗೆ ಕೋವಿಡ್-19 ಲಸಿಕೆ ಹೊರತರಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 'ಕೋವಾಕ್ಸಿನ್' ಮತ್ತು ಅಕ್ಸ್ ಫರ್ಡ್ - ಅಸ್ಟ್ರಾಜಿಂಕಾ ಔಷಧಿ ತಯಾರಿಕಾ ಕಂಪನಿ ಅಭಿವೃದ್ಧಿಪಡಿಸಿರುವ 'ಕೋವಿಶೀಲ್ಡ್ ' ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ಔಷಧಿ ಮಹಾನಿಯಂತ್ರಕರು ( ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಭಾನುವಾರ ಅನುಮೋದನೆ ನೀಡಿದ್ದಾರೆ.