ಕೋಲ್ಕತ್ತ, ಜ. 05 (DaijiworldNews/MB) : ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಬಳಿಕ ಅವರು ಮನೆಯಲ್ಲಿಯೇ ವೈದ್ಯರ ತಂಡದ ನಿಗಾದಲ್ಲಿ ಇರಲಿದ್ದಾರೆ.
ಗಂಗೂಲಿ ಆರೋಗ್ಯದ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ವುಡ್ಲ್ಯಾಂಡ್ ಆಸ್ಪತ್ರೆಯ ಎಂಡಿ ಮತ್ತು ಸಿಇಒ ಡಾ. ರೂಪಾಲಿ ಬಸು ಅವರು, ''ಬುಧವಾರ ಗಂಗೂಲಿಯವರು ಬಿಡುಗಡೆಯಾಗಲಿದ್ದು ಬಳಿಕ ಮನೆಯಲ್ಲಿಯೇ ವೈದರ ನಿಗಾದಲ್ಲಿ ಇರಲಿದ್ದಾರೆ. 2-3 ವಾರಗಳ ಬಳಿಕ ಮುಂದಿನ ಹಂತದ ವೈದ್ಯಕೀಯ ಚಿಕಿತ್ಸೆ ನಡೆಯಲಿದೆ'' ಎಂದು ಮಾಹಿತಿ ನೀಡಿದ್ದಾರೆ.
ಶನಿವಾರ ಗಂಗೂಲಿ ಅವರಿಗೆ ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತವಾಗಿದ್ದು ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ಗಳು ಕಂಡುಬಂದ ಹಿನ್ನೆಲೆ ಆ್ಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟೆಂಟ್ ಅಳವಡಿಸಲಾಗಿತ್ತು. ಈಗ 2-3 ವಾರಗಳ ಬಳಿಕ ಮುಂದಿನ ಹಂತದ ವೈದ್ಯಕೀಯ ಚಿಕಿತ್ಸೆ ನಡೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಂಗೂಲಿ ಅವರನ್ನು ನೋಡಿಕೊಳ್ಳುತ್ತಿದ್ದ ಒಂಬತ್ತು ವೈದ್ಯರ ತಂಡವನ್ನು ಹೃದ್ರೋಗ ತಜ್ಞರಾದ ಡಾ. ದೇವಿ ಶೆಟ್ಟಿ ಅವರು ಭೇಟಿಯಾಗಿದ್ದು ಮುಂದಿನ ಕ್ರಮದ ಬಗ್ಗೆ ಆಸ್ಪತ್ರೆ ತೀರ್ಮಾನ ಕೈಗೊಳ್ಳಲಿದೆ ಎಂದು ವರದಿಯಾಗಿದೆ.