ಬೆಂಗಳೂರು, ಜ. 05 (DaijiworldNews/MB) : ''ಮೀಸಲಾತಿ, ಬೆದರಿಕೆ ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅತಿ ಹೆಚ್ಚು ಸ್ಥಾನ ಗಳಿಸಿದೆವು ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಯಾಕೆ ಇಂಥ ಗತಿ? ತಿಳಿಯದು'' ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಗ್ರಾಮ ಪಂಚಾಯಿತಿ ಚುನಾವಣೆ ನಂತರದ ಬೆಳವಣಿಗೆಗಳು ಆಘಾತಕಾರಿಯಾಗಿವೆ. ಮೀಸಲಾತಿ, ಬೆದರಿಕೆ ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅದಕ್ಕೆ ನಮ್ಮವರೂ ತಿರುಗೇಟು ನೀಡುತ್ತಿದ್ದಾರೆ. ಆದರೆ ಅತಿ ಹೆಚ್ಚು ಸ್ಥಾನ ಗಳಿಸಿದೆವು ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಯಾಕೆ ಇಂಥ ಗತಿ? ತಿಳಿಯದು'' ಎಂದು ಹೇಳಿದ್ದಾರೆ
''ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಕಾಲುಗಳನ್ನು ಹಿಡಿಯುತ್ತಿವೆ, ಅವರ ಮನೆ ಬಾಗಿಲಿಗೆ ಅಲೆಯುತ್ತಿವೆ ಎಂದರೆ, ಕನ್ನಡಿಗರು ಜೆಡಿಎಸ್ಗೆ ಎಷ್ಟು ಬಲ ತುಂಬಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾಗುವ ವಿಚಾರ. ರಾಷ್ಟ್ರೀಯ ಪಕ್ಷಗಳು ನಮ್ಮ ಮುಖಂಡರ ಕಾಲು ಹಿಡಿಯುವುದನ್ನು ನಿಲ್ಲಿಸಿ, ಮರ್ಯಾದೆ ಉಳಿಸಿಕೊಳ್ಳಬೇಕು'' ಎಂದು ಟೀಕಿಸಿದ್ದಾರೆ.