ಲಕ್ನೋ, ಜ.04 (DaijiworldNews/PY): "ನಾನು ಕೊರೊನಾ ಲಸಿಕೆ ವಿಚಾರವಾಗಿ ಬಿಜೆಪಿಯನ್ನು ಪ್ರಶ್ನಿಸಿದ್ದೇ ಹೊರತು ವಿಜ್ಞಾನಿಗಳನಲ್ಲ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.
ಸೋಮವಾರ ಮಾತನಾಡಿದ ಅವರು, "ನಾನು ಅಥವಾ ನಮ್ಮ ಪಕ್ಷ ಬಿಜೆಪಿಗರನ್ನು ಪ್ರಶ್ನೆ ಮಾಡಿದ್ದು. ಬದಲಾಗಿ ವಿಜ್ಞಾನಿಗಳು, ತಜ್ಞರನ್ನು ಅಥವಾ ಸಂಶೋಧಕರನ್ನು ಪ್ರಶ್ನಿಸಿಲ್ಲ. ನಮ್ಮಲ್ಲಿರುವ ಕೆಲವೊಂದು ಸಂಶಯಗಳಿಗೆ ಸ್ಪಷ್ಟನೆ ನೀಡುವುದು ಸರ್ಕಾರ ಜವಾಬ್ದಾರಿ" ಎಂದು ತಿಳಿಸಿದ್ದಾರೆ.
"ಬಡವರಿಗೆ ಯಾವಾಗ ಕೊರೊನಾ ಲಸಿಕೆ ಸಿಗುತ್ತದೆ. ಹಾಗೂ ಕೊರೊನಾ ಲಸಿಕೆ ದೊರೆತರೂ ಕೂಡಾ ಉಚಿತವಾಗಿ ಸಿಗಲಿದೆಯಾ? ಎಂದು ಬಿಜೆಪಿಯನ್ನು ಕೇಳಲು ಇಚ್ಛಿಸುತ್ತೇನೆ" ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ ವಿಚಾರವಾಗಿ ಶನಿವಾರ ಅಖಿಲೇಶ್ ಯಾದವ್ ಅವರು ಹೇಳಿಕೆ ನೀಡಿದ್ದು, ಇದರಿಂದ ಬಿಜೆಪಿ ಕೆಂಡಾಮಂಡಲವಾಗಿತ್ತು. "ಬಿಜೆಪಿ ಸರ್ಕಾರ ನೀಡುತ್ತಿರುವ ಕೊರೊನಾ ಲಸಿಕೆಯನ್ನು ನಾನು ಸ್ವೀಕರಿಸುವುದಿಲ್ಲ. ಅವರ ಮೇಲೆ ನನಗೆ ನಂಬಿಕೆಯಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಲಸಿಕೆ ಸ್ವೀಕರಿಸುತ್ತೇನೆ" ಎಂದು ಅಖಿಲೇಶ್ ಯಾದವ್ ಹೇಳಿದ್ದರು.