ನವದೆಹಲಿ, ಜ.04 (DaijiworldNews/PY): ರೈತರ ಹಾಗೂ ಕೇಂದ್ರ ಸರ್ಕಾರದ ನಡುವಿನ ಮತ್ತೊಂದು ಸುತ್ತಿ ಮಾತುಕತೆಯ ಹಿನ್ನೆಲೆ, "ಇಂದು ರಾಷ್ಟ್ರೀಯತೆಯ ನಿಜವಾದ ಪರೀಕ್ಷೆ ನಡೆಯಲಿದೆ" ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, "ರಾಷ್ಟ್ರೀಯತೆಯ ನಿಜವಾದ ಪರೀಕ್ಷೆ ಇಂದು ನಡೆಯಲಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಅಥವಾ ಕಾರ್ಪೋರೇಟರ್ ಹಿತಾಸಕ್ತಿಗೆ ಅನುಗುಣವಾಗಿ ಮೋದಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆಯೇ ಎನ್ನುವುದು ತಿಳಿಯಲಿದೆ" ಎಂದಿದ್ದಾರೆ.
"ಮೋದಿ ಜಿ, ನೆನಪಿಡಿ, ಇತಿಹಾಸವು ನಿಮ್ಮ ಕ್ರೂರ, ನಿರಂಕುಶಾಧಿಕಾರಿ ಮತ್ತು ಸರ್ವಾಧಿಕಾರಿ ಸರ್ಕಾರವನ್ನು ಎಂದಿಗೂ ಕ್ಷಮಿಸುವುದಿಲ್ಲ" ಎಂದು ತಿಳಿಸಿದ್ದಾರೆ.
"ಚಳಿ, ಗಾಳಿ ಮಳೆ ಎನ್ನದೇ ಪ್ರತಿಭಟನೆ ನಡೆಸುತ್ತಿರುವ ರೈತರು ನಮ್ಮ ಧೈರ್ಯಶಾಲಿ ರೈತರಾಗಿದ್ದಾರೆಯೇ ಹೊರತು ಹೊರಗಿನವರಲ್ಲ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದು, "ಒಂದು ಕಡೆ ಮಾತುಕತೆಗಾಗಿ ಸರ್ಕಾರ ರೈತರನ್ನು ಕರೆಯುತ್ತಿದೆ, ಮತ್ತೊಂದೆಡೆ ಮಳೆ, ಗಾಳಿ, ಚಳಿ ಎನ್ನದೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ಹಠಮಾರಿ ಹಾಗೂ ಕ್ರೂರ ವರ್ತನೆಯಿಂದಾಗಿ ಇದುವರೆಗೆ ಸುಮಾರು 60 ರೈತರು ಸಾವನ್ನಪ್ಪಿದ್ದಾರೆ. ಈ ಕ್ರೂರ ಸರ್ಕಾರವನ್ನು ರೈತರು ಹೇಗೆ ನಂಬಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.