ಬೆಂಗಳೂರು, ಜ. 04 (DaijiworldNews/MB) : ''ವಿಫಲ ಮಾತುಕತೆ ನಡೆಸಿ ಲೆಕ್ಕವಿಡುವ ಬದಲು ರೈತರ ಸಮಸ್ಯೆಗೆ ಪರಿಹಾರ ನೀಡಿ'' ಎಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.
''ರೈತರನ್ನು ತಪ್ಪುದಾರಿಗೆಳೆದು, ಪ್ರತಿಭಟನೆಗೆ ಪ್ರೇರೇಪಿಸಿ ಬೀದಿಗೆ ಬರುವಂತೆ ಮಾಡಿದಾತ ಮಾತ್ರ ವಿದೇಶಕ್ಕೆ ತೆರಳಿ ಮಜಾ ಅನುಭವಿಸುತ್ತಿದ್ದಾನೆ. ರೈತರೊಂದಿಗೆ 7 ಕ್ಕೂ ಅಧಿಕ ಭಾರಿನರೇಂದ್ರ ಮೋದಿ ಸರ್ಕಾರ ಮಾತುಕತೆ ನಡೆಸಿದೆ. ಜನ್ ಕಿ ಬಾತ್ ಆಡುವವ ವಿದೇಶದ ರೆಸಾರ್ಟ್ನಲ್ಲಿ ವಿಶೇಷ ಬಾತ್ ಮಾಡುತ್ತಿದ್ದಾನೆ'' ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ದ ಬಿಜೆಪಿ ಟೀಕೆ ಮಾಡಿ ಟ್ವೀಟ್ ಮಾಡಿತ್ತು.
ಈ ಟ್ವೀಟ್ಗೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಕಾಂಗ್ರೆಸ್, ''ಎಷ್ಟು ಬಾರಿ ಮಾತುಕತೆಯಾದರೂ ರೈತರ ಮನವೊಲಿಸಲು ಸಾಧ್ಯವಾಗದ ನರೇಂದ್ರ ಮೋದಿಯವರ ಮನ್ ಕಿ ಬಾತ್ನ ಶೂನ್ಯ ಫಲಿತಾಂಶ ಎದ್ದು ಕಾಣುತ್ತಿದೆ, ವಿಫಲ ಮಾತುಕತೆಯಾಡಿ ಲೆಕ್ಕವಿಡುವ ಬದಲು ರೈತರ ಸಮಸ್ಯೆಗೆ ಪರಿಹಾರ ಕೊಡುವ ಕರ್ತವ್ಯ ನಿಭಾಯಿಸಿ, 50 ಜನ ರೈತರ ಬಲಿ ತೆಗೆದುಕೊಂಡ ಬಿಜೆಪಿಗೆ ಇನ್ನೂ ಎಷ್ಟು ಜನ ರೈತರ ಹೆಣ ಉರುಳಿಸುವ ಗುರಿಯಿದೆ?'' ಎಂದು ಪ್ರಶ್ನಿಸಿದೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಸಾವಿರಾರು ರೈತರು ಕಳೆದ ೩೮ ದಿನಗಳಿಂದ ದೆಹಲಿಯ ಗಡಿ ಭಾಗಗಳಾದ ಸಿಂಗು, ಟಿಕ್ರಿ ಮತ್ತು ಘಾಜಿಪುರ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈವರೆಗೆ ಸುಮಾರು ಪ್ರತಿಭಟನೆಯಲ್ಲಿ ಭಾಗಿಯಾದ ೫೦ ಜನ ರೈತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.