ಮುಂಬೈ, ಜ. 04 (DaijiworldNews/MB) : ಸುಲಿಗೆ ಪ್ರಕರಣದಲ್ಲಿ ಮುಂಬೈನ ಸೆಷನ್ಸ್ ನ್ಯಾಯಾಲಯವು ಭೂಗತ ಪಾತಕಿ ಛೋಟಾ ರಾಜನ್ ಮತ್ತು ಆತನ ಮೂವರು ಸಹಚರರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
1970ರಲ್ಲಿ ಚೇಂಬೂರ್ ಬಳಿಯ ಸಿನಿಮಾ ಮಂದಿರಗಳ ಮುಂದೆ ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದ ರಾಜೇಂದ್ರ ನಿಕಲಾಜೆಯಾಗಿದ್ದ ರಾಜನ್, ಕಳ್ಳಬಟ್ಟಿ ತಯಾರಿಯಂತಹ ಹಲವು ಅಪರಾಧ ಕೃತ್ಯ ಎಸಗಿದ್ದು, ದಾವೂದ್ ಗ್ಯಾಂಗ್ (ಡಿ–ಗ್ಯಾಂಗ್) ಸೇರಿಕೊಂಡ ಬಳಿಕ ಛೋಟಾ ರಾಜನ್ ಎಂದು ಕುಖ್ಯಾತಿ ಪಡಿದಿದ್ದಾನೆ.
ಈತನ ವಿರುದ್ದ 75 ಅಪರಾಧ ಪ್ರಕರಣಗಳು ದಾಖಲಾಗಿದೆ. ಟಾಡಾ ಅಡಿಯಲ್ಲಿ ನಾಲ್ಕು, ಪೊಟಾದಡಿಯಲ್ಲಿ (ಭಯೋತ್ಪಾದನೆ ತಡೆ ಕಾಯ್ದೆ) ಒಂದು ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ(ಮೊಕಾ) 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು ಭಾರತದ ಅಧಿಕಾರಿಗಳು 2015ರ ಅಕ್ಟೋಬರ್ನಲ್ಲಿ ಇಂಡೊನೇಷ್ಯಾದಲ್ಲಿ ರಾಜನ್ನನ್ನು ಬಂಧಿಸಿದ್ದಾರೆ.
ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಆತನಿಗೆ ಮುಂಬೈನ ಸೆಷನ್ಸ್ ನ್ಯಾಯಾಲಯವು ಸುಲಿಗೆ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ರಾಜನ್ ವಿದೇಶದಲ್ಲಿದ್ದುಕೊಂಡೇ ಭೂಗತ ಲೋಕದ ವ್ಯವಹಾರ ನಿಯಂತ್ರಿಸುತ್ತಿದ್ದ. ಈತನಿಗೂ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂಗೂ ಮುಂಬೈ ಭೂಗತ ಜಗತ್ತಿನ ಮೇಲೆ ಹಿಡಿತ ಸಾಧಿಸುವ ವಿಚಾರದಲ್ಲಿ ಪೈಪೋಟಿ ನಡೆದಿತ್ತು.