ನವದೆಹಲಿ, ಜ. 04 (DaijiworldNews/MB) : ವಾಯುವ್ಯ ದೆಹಲಿಯ ರಸ್ತೆಬದಿಯಲ್ಲಿ ನಿರ್ಗತಿಕರಾಗಿದ್ದ ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿದ ಅಪರಾಧ ಕೃತ್ಯದ ವಿಡಿಯೋ ವೈರಲ್ ಆದ ಬಳಿಕ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಪ್ಪತ್ತರ ಹರೆಯದ ಆರೋಪಿಗಳು ವಾಜೀರ್ಪುರದ ಜೆಜೆ ಕಾಲೋನಿಯಲ್ಲಿ ಮನೆಯಿಲ್ಲದ ನಿಗರ್ತಿಕ ತಾಯಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ದೃಶ್ಯವನ್ನು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಡಿಸೆಂಬರ್ 29 ಮತ್ತು 30 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಜನವರಿ 3 ರಂದು ಸಾಮಾಜಿಕ ಜಾಲತಾಣದಲ್ಲಿ ಈ ಅಪರಾಧದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿದೆ.
ಪೊಲೀಸರ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಪ್ರದೇಶದ ಮಾಹಿತಿ ಸಂಗ್ರಹಿಸಿ ಸ್ಥಳೀಯರ ವಿಚಾರಣೆ ನಡೆಸಿ, ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಆಶ್ರಯತಾಣಗಳಲ್ಲಿ ಹುಡುಕಾಡಿ ಇಬ್ಬರು ಸಂತ್ರಸ್ಥೆಯರನ್ನು ಪತ್ತೆ ಹಚ್ಚಿದ್ದಾರೆ.
ಚಿಂದಿ ಆಯುವ 35 ವರ್ಷ ವಯಸ್ಸಿನ ಮಹಿಳೆ ಹಾಗೂ ಆಕೆಯ ಸುಮಾರು 18 ವರ್ಷ ವಯಸ್ಸಿನ ಮಗಳು ಸಂತ್ರಸ್ಥೆಯರು.
ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು ಭಾರತ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323/341/354/354 ಸಿ / 376/509/506/34 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಬಳಿಕ ಪೊಲೀಸರ ತಂಡ ಆರೋಪಿಗಳ ಶೋಧ ಕಾರ್ಯ ನಡೆಸಿದ್ದು ಆರೋಪಿಗಳಾದ ಜಹಾಂಗೀರ್ ಪುರಿ ನಿವಾಸಿ ಸೋನು (22) ಮತ್ತು ಜೆಜೆ ಕಾಲೋನಿ ನಿವಾಸಿ ಅಮಿತ್ (24) ನನ್ನು ಬಂಧಿಸಿದ್ದಾರೆ. ಹಾಗೆಯೇ ವಿಡಿಯೋ ಮಾಡಿದ ವಾಜಿರ್ಪುರದ ಜೆಜೆ ಕಾಲೋನಿಯ ಕೆ ಬ್ಲಾಕ್ ನಿವಾಸಿ ರಿತಿಕ್ (18)ನನ್ನು ಬಂಧಿಸಲಾಗಿದೆ.