ನವದೆಹಲಿ, ಜ.04 (DaijiworldNews/PY): "ಭಾರತದ ವಿಜ್ಞಾನಿಗಳು ಕೊರೊನಾಕ್ಕೆ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಇಡೀ ದೇಶವೇ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೊ ಕಾನ್ಫೆರನ್ಸ್ ಮೂಲಕ ಮಾತನಾಡಿದ ಅವರು, "ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮಾತ್ರವಲ್ಲ, ಅದಕ್ಕೆ ಜಾಗತಿಕ ಸ್ವೀಕಾರವೂ ಕೂಡಾ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದಿದ್ದಾರೆ.
"ವಿಶ್ವದ ಅತಿದೊಡ್ಡ ಕೊರೊಆನಾ ವ್ಯಾಕ್ಸಿನೇಷನ್ ಕಾರ್ಯಕ್ರಮವು ಭಾರತದಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ದೇಶವು ತನ್ನ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಕೊಡುಗೆಗಳ ಬಗ್ಗೆ ಹೆಮ್ಮೆಪಡುತ್ತದೆ" ಎಂದು ಹೇಳಿದ್ದಾರೆ.
"ಗುಣಮಟ್ಟದಷ್ಟೇ ಪ್ರಮಾಣವು ಮುಖ್ಯವಾಗಿದೆ. ನಮ್ಮ ಆತ್ಮನಿರ್ಭರ್ ಅನ್ವೇಷಣೆಯಲ್ಲಿ ನಮ್ಮ ಮಾನದಂಡಗಳು ನಮ್ಮ ಪ್ರಮಾಣದೊಂದಿಗೆ ಏರಿಕೆಯಾಗಬೇಕು" ಎಂದು ತಿಳಿಸಿದ್ದಾರೆ.
"ಯಾವುದೇ ಸಂಶೋಧನೆಯ ಪ್ರಭಾವವು ವಾಣಿಜ್ಯ, ಸಾಮಾಜಿಕ ಹಾಗೂ ನಮ್ಮ ತಿಳುವಳಿಕೆಯನ್ನು ವಿಸ್ತರಿಸುತ್ತದೆ. ಭವಿಷ್ಯದ ಇತರ ಸಂಭಾವ್ಯ ಉಪಯೋಗಗಳನ್ನು ಮುಂಚಿತವಾಗಿ ಅಂದಾಜು ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ, ಸಂಶೋಧನೆ ಎಂದಿಗೂ ಕೂಡಾ ವ್ಯರ್ಥವಾಗಲಾರದು ಎನ್ನುವುದು ಖಚಿತ. ನಮ್ಮ ವೇದ-ಶಾಸ್ತ್ರಗಳಲ್ಲಿ ಹೇಳಿದಂತೆ ಆತ್ಮ ಅಮರ ಎಂದಹಾಗೆ ಸಂಶೋಧನೆಯೂ ಕೂಡ" ಎಂದಿದ್ದಾರೆ.