ಮುಂಬೈ, ,ಜ.04 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗೂ ರಿಲಯನ್ಸ್ಗೂ ಯಾವ ಸಂಬಂಧವೂ ಇಲ್ಲ, ದುಷ್ಕರ್ಮಿಗಳು ನಡೆಸುತ್ತಿರುವ ಕಾನೂನುಬಾಹಿರ ಕೃತ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಈ ರೀತಿಯ ಹಿಂಸಾತ್ಮಕ ಕೃತ್ಯಗಳಿಂದ ಕಂಪೆನಿಯ ಸಾವಿರಾರು ಉದ್ಯೋಗಿಗಳ ಜೀವ ಅಪಾಯದಲ್ಲಿದ್ದು, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಇರುವ ಮುಖ್ಯವಾದ ಸಂವಹನ ಮೂಲಸೌಕರ್ಯ, ಮಾರಾಟ ಮತ್ತು ಸರ್ವೀಸ್ ಔಟ್ಲೆಟ್ಗಳಿಗೆ ಹಾನಿ ಮತ್ತು ಸಮಸ್ಯೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಲಾಭವನ್ನು ಪಡೆದುಕೊಂಡು ಕೆಲವರು ದುರುದ್ದೇಶಪೂರಿತವಾಗಿ ರಿಲಯನ್ಸ್ ಕಂಪೆನಿಯ ಹೆಸರು ಹಾಳು ಮಾಡುವ ಕೃತ್ಯದಲ್ಲಿ ತೊಡಗಿದ್ದು, ಇವೆಲ್ಲವು ಸತ್ಯವಲ್ಲ ಎಂದು ತಿಳಿಸಿದೆ.