ನವದೆಹಲಿ, ಜ. 04 (DaijiworldNews/MB) : ಏಕ ರಾಷ್ಟ್ರ, ಏಕ ಚುನಾವಣೆ ಕಾನೂನು ರೂಪಿಸುವ ಸಾಧ್ಯತೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದ ಭೂಪೇಂದ್ರ ಯಾದವ್ ತಳ್ಳಿಹಾಕಿದ್ದು, ''ಎಲ್ಲಾ ರಾಜಕೀಯ ಪಕ್ಷಗಳ ಒಮ್ಮತದ ಬಳಿಕ ಮಾತ್ರ ಏಕ ರಾಷ್ಟ್ರ, ಏಕ ಚುನಾವಣೆ ಕಾನೂನು ಜಾರಿಗೆ ತರಲಾಗುವುದು'' ಎಂದು ತಿಳಿಸಿದರು.
''ದೇಶದಲ್ಲಿ ಏಕಕಾಲದಲ್ಲಿ ನಡೆಯುವ ಚುನಾವಣೆಗಳಿಂದ ಹಲವಾರು ಪ್ರಯೋಜನಗಳು ಇದೆ'' ಎಂದು ಹೇಳಿದ ಅವರು, ''ಇದು ದೇಶ ಮತ್ತು ರಾಜ್ಯಗಳ ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸುತ್ತದೆ. ಮರು ಚುನಾವಣೆ ಹಾಗೂ ನೀತಿ ಸಂಹಿತೆ ಪಾಲನೆಗೆ ಅಡ್ಡಿಯಾಗುವುದಿಲ್ಲ. ಕಪ್ಪುಹಣವನ್ನು ಸಹ ಏಕಕಾಲಿಕ ಚುನಾವಣೆಗಳು ತಡೆಯುತ್ತದೆ'' ಎಂದು ಹೇಳಿದರು.
ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಹ-ಉಸ್ತುವಾರಿ ಮತ್ತು ವಕ್ತಾರ ಡಾ.ಸಂಜಯ್ ಮಯೂಕ್ ಅವರು ಭಾನುವಾರ ಆಯೋಜಿಸಿದ್ದ ವೆಬಿನಾರ್ನಲ್ಲಿ ಮಾತನಾಡಿದ ಭೂಪೇಂದ್ರ ಯಾದವ್, ''ಏಕ ರಾಷ್ಟ್ರ, ಏಕ ಚುನಾವಣೆ ಹೊಸ ವಿಷಯವಲ್ಲ. ಸ್ವತಂತ್ರ ಭಾರತದ ಮೊದಲ ಲೋಕಸಭಾ ಚುನಾವಣೆಯೂ ಇದೇ ಮಾರ್ಗದಲ್ಲಿ ನಡೆಯಿತು. ಈ ಪರಿಕಲ್ಪನೆಯ ಮೇಲೆಯೇ 1952, 1957, 1962 ಮತ್ತು 1967 ರ ಚುನಾವಣೆಗಳು ನಡೆದಿವೆ'' ಎಂದರು.
ಏಕಕಾಲದಲ್ಲಿ ಚುನಾವಣೆಗೆ ರಾಜಕೀಯ ಪಕ್ಷಗಳನ್ನು ಮನವೊಲಿಸುವುದು ಸುಲಭವೇ? ಎಂದು ಸುದ್ದಿ ಸಂಸ್ಥೆಯ ಪ್ರಶ್ನೆಗೆ ಉತ್ತರಿಸಿದ ಯಾದವ್, ''ರಾಜಕೀಯ ಪಕ್ಷಗಳೊಂದಿಗೆ ಎರಡು-ಮೂರು ಹಂತಗಳಲ್ಲಿ ಚರ್ಚೆಗಳು ನಡೆದಿವೆ. ಕಾಂಗ್ರೆಸ್ ಸಂಸದ ಅಧ್ಯಕ್ಷತೆ ವಹಿಸಿದ್ದ ಸಂಸದೀಯ ಸ್ಥಾಯಿ ಸಮಿತಿಯ ವರದಿ ಬಂದಿದೆ. ಇದರಲ್ಲಿ ಹಲವಾರು ಪಕ್ಷಗಳ ಸಂಸದರು ಸೇರಿದ್ದರು'' ಎಂದು ತಿಳಿಸಿದರು.
"ಬಿಎಸ್ ಚೌಹಾಣ್ ಅವರ ನೇತೃತ್ವದಲ್ಲಿ ಕಾನೂನು ಆಯೋಗವು ನೀಡಿದ ವರದಿಯನ್ನು ರಾಜಕೀಯ ಪಕ್ಷಗಳು ಸಹ ಮಂಡಿಸಿವೆ. ಯಾವುದೇ ಭಿನ್ನಾಭಿಪ್ರಾಯವನ್ನು ಸರಿಪಡಿಸುವ ಪ್ರಯತ್ನ ನಡೆಯಲಿದೆ. ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಒಮ್ಮತಕ್ಕೆ ಬರಲು ಪ್ರಯತ್ನಿಸುತ್ತೇವೆ'' ಎಂದು ಹೇಳಿದರು.
''ಮೋದಿಯವರು ಏಕ ರಾಷ್ಟ್ರ, ಏಕ ಚುನಾವಣೆ ಬಗ್ಗೆ ಹಲವಾರು ಸಂದರ್ಭಗಳಲ್ಲಿ ಚರ್ಚಿಸಿದ್ದಾರೆ. ಇದರ ಪ್ರಯೋಜನದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ'' ಎಂದರು.