ಬೆಂಗಳೂರು,ಜ.04 (DaijiworldNews/HR): ವೈವಾಹಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ಗೆ ಬೀಳಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದಡಿ ಸಿ.ಎಸ್. ಕವಿತಾ (38) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಕವಿತಾ ಅವರನ್ನು ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಬ್ಲ್ಯಾಕ್ಮೇಲ್ ಸಂಬಂಧ ಪ್ರೇಮ್ ಎಂಬುವರು ದೂರು ನೀಡಿದ್ದು, ತನಿಖೆ ಕೈಗೊಂಡು ಕವಿತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರೇಮ್ ಅವರು ವಧುವನ್ನು ಹುಡುಕುತ್ತಿದ್ದು ಜೀವನ್ ಸಾಥಿ ಡಾಟ್ ಕಾಮ್ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಅವರಿಗೆ ರಿಕ್ವೆಸ್ಟ್ ಕಳುಹಿಸಿದ್ದ ಕವಿತಾ ಅನ್ಯೋನ್ಯವಾಗಿ ಮಾತನಾಡಿದ್ದರು ಬಳಿಕ ಡಿ. 26ರಂದು ಪ್ರೇಮ್ ಮನೆಗೆ ಹೋಗಿದ್ದ ಆರೋಪಿ, ಸಲುಗೆಯಿಂದ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಅದೇ ದೃಶ್ಯಗಳನ್ನು ಲ್ಯಾಪ್ಟಾಪ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ನಂತರ ವಿಡಿಯೊ ತೋರಿಸಿ ಬ್ಲ್ಯಾಕ್ಮೇಲ್ ಮಾಡಿ 5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದೂ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.