ಗೋರಖಪುರ, ಜ.04 (DaijiworldNews/HR): "ಮೊದಲಿಗೆ ರಾಮ ಮಂದಿರ ಹೋರಾಟವನ್ನು ವಿರೋಧಿಸುತ್ತಿದ್ದರು, ಬಳಿಕ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದಾಗ ರಾಮ ಎಲ್ಲರಿಗೂ ಸೇರಿದವರೆನ್ನುತ್ತಿದ್ದಾರೆ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೆಲವರು ರಾಮನ ಭಕ್ತರ ವಿರುದ್ಧ ಆರೋಪ ಮಾಡಿ ಅಸ್ತಿತ್ವದಲ್ಲಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಅವರೆಲ್ಲ ರಾಮ ಭಕ್ತರ ಶಕ್ತಿಯನ್ನು ಅನುಭವಿಸುತ್ತಾ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಿದ್ದಾರೆ. ರಾಮ ಜನ್ಮಭೂಮಿ ಹೋರಾಟವನ್ನು ಯಾರೂ ವಿರೋಧಿಸಬಾರದು ಎಂದು ನಾವು ಹೇಳುತ್ತಿದ್ದೆವು, ಕೊನೆಗೆ ರಾಮನ ಭಕ್ತರು ಸಲ್ಲಿಸಿದ ಸೇವೆಯು ವಿಜಯಶಾಲಿಯಾಗಿದೆ" ಎಂದರು.
ಇನ್ನು "ಇದೇ ವೇಳೆ ಕೊರೊನಾ ವೈರಸ್ ಮುಕ್ತ ಭಾರತಕ್ಕಾಗಿ ಶ್ರಮ ವಹಿಸಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಯೋಗಿ, ಮೋದಿ ಮಾರ್ಗದರ್ಶನದಲ್ಲಿ ದೇಶದ ವಿಜ್ಞಾನಿಗಳು ಕೊರೊನಾ ಲಸಿಕೆ ತಯಾರಿಸಿದ್ದಾರೆ. ಒಂದೇ ಸಮಯದಲ್ಲಿ ಎರಡು ಲಸಿಕೆಗಳನ್ನು ಬಿಡುಗಡೆ ಮಾಡಿದ ಜಗತ್ತಿನ ಮೊದಲ ದೇಶ ಭಾರತ" ಎಂದು ಹೇಳಿದ್ದಾರೆ.