ಗಾಜಿಯಾಬಾದ್, ಜ.04 (DaijiworldNews/PY): ಅಂತ್ಯಸಂಸ್ಕಾರಕ್ಕೆಂದು ಶವಾಗಾರಕ್ಕೆ ತೆರಳಿದ್ದವರ ಮೇಲೆ ಛಾವಣಿ ಕುಸಿದು 24 ಮಂದಿ ಮೃತಪಟ್ಟು, 17 ಮಂದಿ ಗಾಯಗೊಂಡಿರುವ ಘಟನೆ ರವಿವಾರ ಗಾಜಿಯಾಬಾದ್ ಜಿಲ್ಲೆಯ ಮುರಾದ್ನಗರದಲ್ಲಿ ನಡೆದಿದೆ.
ಮಳೆ ಬರುತ್ತಿದ್ದರಿಂದ ಇತ್ತೀಚೆಗಷ್ಟೆ ನಿರ್ಮಿಸಿದ್ದ ಶವಾಗಾರದ ಛಾವಣಿಯ ಕೆಳಗೆ ಆಶ್ರಯ ಪಡೆಯುತ್ತಿದ್ದರು. ಈ ವೇಳೆ ಛಾವಣಿ ಕುಸಿದಿದೆ. ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ನಂತರ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಎನ್ಡಿಆರ್ಎಫ್ ಘಟಕವೂ ಕೂಡಾ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಮೃತರನ್ನು ಹಾಗೂ ಗಾಯಾಳುಗಳನ್ನುಅವಶೇಷಗಳಿಂದ ಹೊರಗೆಳೆದಿದೆ.
"ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಸಂಜೆಯ ವೇಳೆಗೆ ಗಾಯಗೊಂಡವರಲ್ಲಿ ಕನಿಷ್ಠ 18 ಮಂದಿಯನ್ನು ಗುರುತಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘಟನೆಯ ಸಂಬಂಧ ಸಂತಾಪ ಸೂಚಿಸಿದ್ದಾರೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅಬರು ಮೃತರ ಕುಟುಂಗಳಿಗೆ ತಲಾ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.