ಜೈಪುರ, ಜ.04 (DaijiworldNews/HR): "ಅರ್ಧ ಪ್ಯಾಂಟ್ ಧರಿಸಿ ಫೋನ್ನಲ್ಲಿ ಭಾಷಣಗಳನ್ನು ಮಾಡುವುದು ರಾಷ್ಟ್ರೀಯತೆಯಲ್ಲ, ರೈತರ ಕಲ್ಯಾಣ ಬಗ್ಗೆ ಮಾತನಾಡಿದರೆ ಅದು ನಿಜವಾದ ರಾಷ್ಟ್ರೀಯತೆ" ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು,"ರಾಷ್ಟ್ರೀಯತೆ ಅರ್ಧ ಪ್ಯಾಂಟ್ ಧರಿಸಿ ನಾಗ್ಪುರದಿಂದ ಫೋನ್ ಭಾಷಗಳನ್ನು ಮಾಡುವುದಲ್ಲ ಬದಲಾಗಿ ರೈತರ ಕಲ್ಯಾಣದ ಬಗ್ಗೆ ಮಾತನಾಡಿದರೆ ಅದುವೇ ನಿಜವಾದ ರಾಷ್ಟ್ರೀಯತೆ" ಎಂಬುದಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಆರ್ಎಸ್ಎಸ್ ಹೆಸರನ್ನು ಉಚ್ಚರಿಸದೆಯೇ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕೇಂದ್ರ ಸರಕಾರವು ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದ ಅವರು, "ಇದು ಕೇಂದ್ರ ಸರಕಾರದಿಂದ ಬಗೆಹರಿಸಲು ಸಾಧ್ಯವಾಗದಷ್ಟು ದೊಡ್ಡ ಸಮಸ್ಯೆಯಲ್ಲ, ಈ ಕಾನೂನಿನಲ್ಲಿ ನಾವು ಎಂಎಸ್ಪಿ ನಿಬಂಧನೆಯನ್ನು ಸೇರಿಸುತ್ತಿದ್ದೇವೆ ಮತ್ತು ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುತ್ತೇವೆ. ಕೆಲವು ಕಾಯ್ದೆಗಳನ್ನು ಹಿಂಪಡೆಯುವುದರಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು" ಎಂದರು.
"ಯಾವುದೇ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವುದು ಮತ್ತು ಅವುಗಳನ್ನು ಹಿಂತೆಗೆದುಕೊಳ್ಳುವುದು ಅಥವಾ ತಪ್ಪನ್ನು ಒಪ್ಪಿಕೊಳ್ಳುವುದು ನಾಯಕರ ಗೌರವವನ್ನು ಹೆಚ್ಚಿಸುತ್ತದೆ ಹೊರತು ಇದು ನಾಚಿಕೆಗೇಡಿನ ವಿಷಯವಲ್ಲ" ಎಂದು ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.