ಬೆಂಗಳೂರು, ಜ. 04 (DaijiworldNews/MB) : ''ಕಾರ್ಪೊರೇಟ್ ಧಣಿಗಳ ಕಾಲು ನೆಕ್ಕುವ ಸರ್ಕಾರಕ್ಕೆ ಇನ್ನೆಷ್ಟು ರೈತರ ಪ್ರಾಣ ಬೇಕಾಗಿದೆ'' ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಸಾವಿರಾರು ರೈತರು ಕಳೆದ 38 ದಿನಗಳಿಂದ ದೆಹಲಿಯ ಗಡಿ ಭಾಗಗಳಾದ ಸಿಂಗು, ಟಿಕ್ರಿ ಮತ್ತು ಘಾಜಿಪುರ್ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಈವರೆಗೆ ಸುಮಾರು 50 ಜನ ರೈತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ವರದಿಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ''ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವೊಂದು ದೇಶಕ್ಕೆ ಅನ್ನ ಕೊಡುವ ರೈತನನ್ನು ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಂಡ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಕಾರ್ಪೊರೇಟ್ ಧಣಿಗಳ ಕಾಲು ನೆಕ್ಕುವ ಸರ್ಕಾರಕ್ಕೆ ಇನ್ನೆಷ್ಟು ರೈತರ ಪ್ರಾಣ ಬೇಕಾಗಿದೆ? 40 ದಿನದಲ್ಲಿ 50 ರೈತರ ಜೀವ ತೆಗೆದ ಕೇಂದ್ರ ಸರ್ಕಾರ 'ಕೊಲೆಗಡುಕ' ಸರ್ಕಾರವಲ್ಲದೆ, ರೈತಪರ ಸರ್ಕಾರವೆ?'' ಎಂದು ಪ್ರಶ್ನಿಸಿದ್ದಾರೆ.