ಕೋಲ್ಕತ್ತ, ಜ. 04 (DaijiworldNews/MB) : ''ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಮೇಲೆ ರಾಜಕೀಯ ಸೇರುವ ಒತ್ತಡ ಹೇರಲಾಗಿತ್ತು'' ಎಂದು ಮಾಜಿ ಸಚಿವ ಹಾಗೂ ಸಿಪಿಐ(ಎಂ) ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಆರೋಪಿಸಿದ್ದಾರೆ.
ಗಂಗೂಲಿ ಅವರಿಗೆ ಶನಿವಾರ ಹೃದಯಾಘಾತವಾಗಿದ್ದು ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆ್ಯಂಜಿಯೊಪ್ಲಾಸ್ಟಿ ಶಸ್ತ್ರ ಚಿಕಿತ್ಸೆಯು ನಡೆದಿದೆ. ಈ ಹಿಂದೆ ಗಂಗೂಲಿ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಗಂಗೂಲಿ ಯಾವ ಪ್ರತಿಕ್ರಿಯೆಯೂ ನೀಡಿರಲಿಲ್ಲ.
ಆದರೆ ಈಗ ಸೌರವ್ ಗಂಗೂಲಿ ಕುಟುಂಬದ ಸ್ನೇಹಿತರೂ ಆಗಿರುವ ಸಿಪಿಐಎಂ ಮುಖಂಡ ಅಶೋಕ್ ಭಟ್ಟಾಚಾರ್ಯ ಅವರು ಗಂಗೂಲಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಮಾತನಾಡಿ, ''ಸೌರವ್ ಗಂಗೂಲಿ ಅವರಿಗೆ ರಾಜಕೀಯಕ್ಕೆ ಸೇರಲು ಒತ್ತಡ ಹಾಕಲಾಗುತ್ತಿತ್ತು'' ಎಂದು ಆರೋಪಿಸಿದ್ದಾರೆ.
''ಕೆಲವರು ಅವರನ್ನು ರಾಜಕೀಯವಾಗಿ ಬಳಸಲು ಬಹಳ ಪ್ರಯತ್ನ ಪಟ್ಟಿದ್ದಾರೆ. ಅದು ಅವರಿಗೆ ಒತ್ತಡ ಹೇರಿದಂತಾಗಿದೆ. ಆದರೆ ಅವರು ನಿಜವಾಗಿ ರಾಜಕೀಯ ಅಂಶವಲ್ಲ. ಅವರು ಕ್ರೀಡಾ ಐಕಾನ್ ಆಗಿಯೇ ಗುರುತಿಸಬೇಕು. ನಾನು ಅವರಿಗೆ ರಾಜಕೀಯ ಸೇರದಂತೆ ಮನವಿ ಮಾಡಿದ್ದೆ. ಅವರು ಅದನ್ನು ವಿರೋಧಿಸಿಲ್ಲ'' ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ''ಕೆಲವರು ಎಲ್ಲದರಲ್ಲೂ ರಾಜಕೀಯ ಹುಡುಕುತ್ತಾರೆ'' ಎಂದು ಹೇಳಿದ್ದಾರೆ. ಹಾಗೆಯೇ ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಶೋಭನ್ದೇಬ್ ಚಟರ್ಜಿ ಗಂಗೂಲಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಮಾತನಾಡಿ, ''ದಾದಾ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸುವ ಯಾವುದೇ ಪ್ರಯತ್ನ ನಾವು ಮಾಡಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.