ನವದೆಹಲಿ, ಜ 03 (DaijiworldNews/SM): ರೈತರ ವಿರೋಧದ ಮಧ್ಯೆಯೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಈಗಾಗಲೇ 39 ದಿನಗಳಿಂದ ಪ್ರತಿಭಟನೆ ಕೂಡ ನಡೆಸಲಾಗುತ್ತಿದೆ. ಪ್ರತಿಭಟನಾ ನಿರತ ರೈತರ ಪರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧ್ವನಿ ಎತ್ತಿದ್ದು, ಕೇಂದ್ರ ಸರ್ಕಾರ ಅಹಂಕಾರ ಬದಿಗಿಟ್ಟು ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಇಂತಹ ಅಹಂಕಾರಿ ಸರಕಾರ ಇದೇ ಮೊದಲು ನೋಡುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಭಾವನೆಗಳನ್ನು ನಿರ್ಲಕ್ಷಿಸುವ ಸರ್ಕಾರಗಳು ಹಾಗೂ ಅದರ ನಾಯಕರುಗಳಿಗೆ ದೀರ್ಘಾವಧಿ ಸರ್ಕಾರ ನಡೆಸಲು ಸಾಧ್ಯವಿಲ್ಲ. ರೈತರ ಪ್ರತಿಭಟನೆಯನ್ನು ಸುಲಭದ ತುತ್ತಾಗಿಸಿಕೊಳ್ಳಬಹುದು ಎಂದು ಭಾವಿಸಿದವರಿಗೆ ಈಗ ಅದು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಈಗಲೂ ಅವಕಾಶವಿದ್ದು, ಸರಕಾರ ಅಹಂ ಭಾವನೆ ಬದಿಗಿತ್ತು, ಕಾನೂನುಗಳನ್ನು ಹಿಂಪಡೆಯಲಿ ಎಂದು ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.