ಬೆಂಗಳೂರು, ಜ. 03 (DaijiworldNews/MB) : ''ಬಿಜೆಪಿಗೆ ಹೇಳೋರು, ಕೇಳೋರು ಯಾರೂ ಇಲ್ಲ, ಈಗ ಅದು 'ಮನೀ' ವಾದ ಅನುಸರಿಸುತ್ತಿದೆ'' ಎಂದು ಮಾಜಿ ಸಚಿವ ರಾಮಲಿಂಗ ರೆಡ್ಡಿ ದೂರಿದರು.
ಕಾಂಗ್ರೆಸ್ ಬೆಂಗಳೂರು ಘಟಕದ ಸಭೆಯಲ್ಲಿ ಮಾತನಾಡಿದ ಅವರು, ''ಬಿಜೆಪಿಗೆ ಅವರು ನಡೆದದ್ದೆ ಹಾದಿ ಎಂದಾಗಿದೆ. ಅವರು ವಿರೋಧ ಪಕ್ಷಗಳನ್ನು ಮಟ್ಟ ಹಾಕಲು ಹೊರಟಿದ್ದಾರೆ. ಎಲ್ಲರನ್ನೂ ಆಮಿಷ ಒಡ್ಡಿ ಬಿಜೆಪಿಗೆ ಸೆಳೆಯುತ್ತಿದ್ದಾರೆ. ತಮ್ಮ ಲೋಪವನ್ನು ಮುಚ್ಚಲೆಂದೇ ಬಿಜೆಪಿಯವರು ಆಮಿಷ ಒಡ್ಡುತ್ತಿದ್ದಾರೆ. ಅವರ ಭ್ರಷ್ಟಾಚಾರ ತೀರಾ ವಿಪರೀತವಾಗಿದೆ'' ಎಂದು ಹೇಳಿದರು.
''ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದರೂ ಯಾರಿಗೂ ಮೋದಿ ಎದುರು ಮಾತನಾಡುವ ತಾಕತ್ತಿಲ್ಲ. ನಮ್ಮ ಜಿಎಸ್ ಟಿ ಹಣ ನೀಡಿಲ್ಲ. ಆದರೆ ಬಿಜೆಪಿ ಸಂಸದರು ಕೇಳಲ್ಲ. ನೆರೆ,ಬರದ ಹಣವನ್ನೂ ಕೇಂದ್ರ ಕೊಟ್ಟಿಲ್ಲ. ನಮ್ಮ ಹಣವನ್ನು ನಾವು ಕೇಳಿದರೆ ಆರ್ಬಿಐ ಬಳಿ ಸಾಲ ಮಾಡುವಂತೆ ಹೇಳುತ್ತಾರೆ'' ಎಂದು ಕಿಡಿಕಾರಿದರು.
''ಬಿಜೆಪಿ ಈ ಹಿಂದೆ ಮನುವಾದ ಅನುಸರಣೆ ಮಾಡುತ್ತಿತ್ತು. ಈಗ ಬಿಜೆಪಿ 'ಮನೀ' ವಾದ ಅನುಸರಿಸುತ್ತಿದೆ'' ಎಂದು ವ್ಯಂಗ್ಯವಾಡಿದರು.
''ಮೋದಿಗೆ ಅಮೇರಿಕಾದ ಅವಾರ್ಡ್ ನೀಡಿದ್ದಾರೆ. ಟ್ರಂಪ್ ಸೋಲೋದಕ್ಕೆ ಓಟ್ ಕೊಡಿಸಿದರಲ್ಲ, ಅದಕ್ಕೆ ಅವಾರ್ಡ್ ನೀಡಿದ್ದಾರೆ'' ಎಂದು ಲೇವಡಿ ಮಾಡಿದರು.
''ರೈತರ ಹೋರಾಟಕ್ಕೆ ಬಿಜೆಪಿಯವರ ಖಲಿಸ್ತಾನದ ಬಣ್ಣ ಕಟ್ಟಿದ್ದಾರೆ. ಹೀಗಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಿದೆ'' ಎಂದು ಕೂಡಾ ಈ ಸಂದರ್ಭದಲ್ಲೇ ಹೇಳಿದರು.
''ಬಿಜೆಪಿಯಲ್ಲಿ ಅನೇಕ ಗುಂಪುಗಳಿವೆ, ಬಿಜೆಪಿ ನಾಯಕರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರೊಳಗೆ ಗುಂಪುಗಾರಿಕೆಯಿದೆ'' ಎಂದರು.