ಬೆಂಗಳೂರು, ಜ. 03 (DaijiworldNews/MB) : ಜೆ''ಡಿಎಸ್ ಎನ್ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಬಿಜೆಪಿ ಹರಡುತ್ತಿದೆ. ಇದೆಲ್ಲವೂ ಅಪ್ಪಟ ಸುಳ್ಳು'' ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಜೆಡಿಎಸ್ ಎನ್ಡಿಎ ಕೂಟ ಸೇರಿಲಿದೆ ಎಂಬ ಸುದ್ದಿಗಳ ವಿರುದ್ದ ಸರಣಿ ಟ್ವೀಟ್ ಮಾಡಿರುವ ಅವರು, ''ಜೆಡಿಎಸ್ ಅನ್ನು ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ನಿಂತಿದೆ. ಇದಕ್ಕಾಗಿಯೇ ಜೆಡಿಎಸ್ ಎನ್ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದೆ. ಇದೆಲ್ಲವೂ ಅಪ್ಪಟ ಸುಳ್ಳು'' ಎಂದು ತಿಳಿಸಿದ್ದಾರೆ.
''ನೆನಪಿರಲಿ, ಪ್ರಧಾನಿ ಅವರೊಂದಿಗೆ ರಾಜ್ಯ ಬಿಜೆಪಿ ನಾಯಕರಿಗಿಂತಲೂ ಉತ್ತಮ ಬಾಂಧವ್ಯವೂ ನನಗಿದೆ. ಯಡಿಯೂರಪ್ಪ ಹಿರಿಯರು ಎಂಬ ಗೌರವವೂ ಇದೆ. ವಿರೋಧಕ್ಕಾಗಿ ವಿರೋಧ ಪಕ್ಷವಾಗಿರಬಾರದು ಎಂಬ ಆಶಯವೂ ಇದೆ. ಬಿಜೆಪಿ ಅಪಪ್ರಚಾರಕ್ಕೆ ಕೈ ಹಾಕಿದರೆ, ಬಾಂಧವ್ಯ, ಗೌರವ, ಆಶಯಗಳಿಗೆ ಧಕ್ಕೆಯಾಗಲಿದೆ. ಜೆಡಿಎಸ್ ವಿಚಾರದಲ್ಲಿ ಬಿಜೆಪಿಯು ಎಚ್ಚರವಾಗಿರಲಿ'' ಎಂದು ಆಕ್ರೋಶಗೊಂಡಿದ್ದಾರೆ.
''ಜೆಡಿಎಸ್ ಜೊತೆಗೆ ಮಿತ್ರತ್ವದ ನಾಟಕವಾಡಿ, ಕಡೆಗೆ ಪಕ್ಷವನ್ನೇ ಒಡೆಯಲು ಯತ್ನಿಸಿದವರು ಅನೇಕರು. ಈಗ ಬಿಜೆಪಿ ಸರದಿ. ಅಷ್ಟಕ್ಕೂ ಮೈತ್ರಿಗೆ ಜೆಡಿಎಸ್ನಿಂದ ಬಿಜೆಪಿಗೆ ಅರ್ಜಿ ಹಾಕಿದವರು ಯಾರು? ಜೆಡಿಎಸ್ನೊಂದಿಗೆ ಮೈತ್ರಿ ಇಲ್ಲವೆಂದಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಮೈತ್ರಿ ಪ್ರಸ್ತಾಪ ಇಟ್ಟವರ್ಯಾರು'' ಎಂದು ಪ್ರಶ್ನಿಸಿದ್ದಾರೆ.
''ಜೆಡಿಎಸ್ ಎನ್ಡಿಎ ಮೈತ್ರಿಕೂಟ ಸೇರುತ್ತದೆ, ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಾಡಲಾಗುತ್ತದೆ ಎಂಬುದೆಲ್ಲವೂ ಸುಳ್ಳಿನ ಕಂತೆ. ಈ ರೀತಿಯ ಆಮಿಷಗಳ ಮೂಲಕ ಬಿಜೆಪಿಯು ಜೆಡಿಎಸ್ ಕಾರ್ಯಕರ್ತರು, ಜೆಡಿಎಸ್ ಬೆಂಬಲಿಸುವ ಜನರ ಮನಸ್ಸುಗಳಿಗೆ ವಿಷ ಬಿತ್ತುವ ಕೆಲಸ ಮಾಡುತ್ತಿದೆ. ಇದು ನೈತಿಕವಲ್ಲದ ರಾಜಕಾರಣ ಎಂಬುದನ್ನು ಬಿಜೆಪಿ ತಿಳಿಯಲಿ'' ಎಂದು ಕಿಡಿಕಾರಿದ್ದಾರೆ.
''1997ರಲ್ಲಿ ದೇವೇಗೌಡರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಇದೇ ಬಿಜೆಪಿಯ ಅಗ್ರಮಾನ್ಯ ಸಾರ್ವಕಾಲಿಕ ನಾಯಕ ದಿ. ವಾಜಪೇಯಿ ಅವರು ದೇವೇಗೌಡರಿಗೆ, ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿ ಬಂದವರು ನಾವು. ಇನ್ನು ಯಕಶ್ಚಿತ್ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ'' ಎಂದು ಹೇಳಿದ್ದಾರೆ.
''ಸದ್ಯ ಯಾವ ಪಕ್ಷಕ್ಕೆ ಯಾರ ಅಗತ್ಯವೂ ಇಲ್ಲ. ನಮಗಂತೂ ಬಿಜೆಪಿ ಸ್ನೇಹ ಬೇಕಿಲ್ಲ.ನಮಗೆ ಬೇಕಿರುವುದು ರಾಜ್ಯದ ಅಭಿವೃದ್ಧಿ ಹಾಗೂ ನಮ್ಮ ಕಾರ್ಯಕರ್ತರು. ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯವಿದೆ ಎಂಬುದು ಗ್ರಾ.ಪಂ. ಚುನಾವಣೆ ಫಲಿತಾಂಶದಿಂದ ಎಲ್ಲರಿಗೂ ಗೊತ್ತಾಗಿದೆ. ಈಗ ನಮ್ಮ ಮುಂದಿರುವುದು ಪಕ್ಷದ ಸಂಘಟನೆ ಮಾತ್ರ'' ಎಂದಿದ್ದಾರೆ.