ಶಿವಮೊಗ್ಗ, ಜ.03 (DaijiworldNews/PY): "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗಿದೆ. ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಯಾವುದೂ ಕೂಡಾ ಅಸಾಧ್ಯವಲ್ಲ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕಳೆದ 30-40 ವರ್ಷಗಳಿಂದ ಪಟ್ಟ ಶ್ರಮಕ್ಕೆ ಇಂದು ಸೂಕ್ತವಾದ ಪ್ರತಿಫಲ ದೊರೆತಿದೆ. ಗ್ರಾ.ಪಂ ಚುನಾವಣಾ ಫಲಿತಾಂಶವು ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಜಯ ಸಾಧಿಸುವುದಲ್ಲದೇ, ವಿಧಾನಸಭೆ ಚುನಾವಣೆಯಲ್ಲಿ ಕೂಡಾ 150 ಸ್ಥಾನಗಳಿಸುವ ಗುರಿ ಇಟ್ಟುಕೊಂಡಿದ್ದೇವೆ" ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಗೋಹತ್ಯೆ ನಿಷೇಧ ಕಾನೂನು ಅಂತಿಮ ಹಂತಕ್ಕೆ ತಲುಪಿದೆ. ರಾಜ್ಯ ಸರ್ಕಾರವು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ವಿಧೇಯಕ-2020 ಕಾಯ್ದೆಯನ್ನು ಸುಗ್ರೀವಾಜ್ಞೆ ಮುಖೇನ ಜಾರಿಗೆ ತರುತ್ತಿದೆ. ಗ್ರಾ.ಪಂ.ಚುನಾವಣೆಯನ್ನು ನಮ್ಮ ಬೆಂಬಲಿತ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಶಾಲಿಯಾಗಿದ್ದಾರೆ. ಈ ಪೈಕಿ ಹಲವು ಮಂದಿ ಪಂಚಾಯತ್ ಅಧ್ಯಕ್ಷರಾಗಲಿದ್ದಾರೆ" ಎಂದು ಹೇಳಿದರು.