ನವದೆಹಲಿ, ಜ. 03 (DaijiworldNews/MB) : ದೆಹಲಿ ಮತ್ತು ಹೊರವಲಯದಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು ಈ ಮಳೆಯು ಧರಣಿ ನಿರತ ರೈತರಿಗೆ ಸಂಕಷ್ಟವನ್ನು ಹೆಚ್ಚಿಸಿದೆ. ಈಗಾಗಲೇ ಕೊರೆಯುವ ಚಳಿಯಲ್ಲಿ ರೈತರು ಕಳೆದ 37 ದಿನಗಳಿಂದ ನಡೆಯುತ್ತಿದೆ. ಈಗ ಧಿಡೀರ್ ಮಳೆಯು ರೈತರ ಭವನೆಯನ್ನು ಮತ್ತಷ್ಟು ಅಧಿಕಗೊಳಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯ, ರೈತರ ಮುಖಂಡ ಅಭಿಮನ್ಯು ಕೊಹಾರ್, ಕೃಷಿಕರು ಧರಣಿ ನಡೆಸುತ್ತಿರುವ ಸ್ಥಳಗಳಲ್ಲಿ ನೀರು ನಿಂತಿದ್ದು ರೈತರಿಗಾಗಿ ನೀರು ನಿರೋಧಕ ಟೆಂಟ್ಗಳನ್ನು ಹಾಕಲಾಗಿದೆ. ಆದರೆ, ಕೊರೆಯುವ ಚಳಿ ಮತ್ತು ನಿಂತ ನೀರಿನಿಂದಾಗಿ ಆಗುತ್ತಿರುವ ಸಮಸ್ಯೆಯನ್ನು ತಡೆಯಲಾಗುತ್ತಿಲ್ಲ. ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆದರೆ ಸರ್ಕಾರ ಮಾತ್ರ ನಮ್ಮ ಸಂಕಷ್ಟಕ್ಕೆ ಸ್ಪಂಧಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಸಿಂಗು ಗಡಿಯಿಂದ ಬಂದಿರುವ ಗುರ್ವಿಂದರ್ ಸಿಂಗ್ ಮಾತನಾಡಿ, ''ಸ್ಥಳದಲ್ಲಿ ನಾಗರಿಕ ಮೂಲಸೌಲಭ್ಯಗಳೂ ಇಲ್ಲ. ಏನೇ ಸಮಸ್ಯೆ ಇದ್ದರೂ ನಮ್ಮ ಬೇಡಿಕೆ ಈಡೇರುವವರೆಗೂ ಸ್ಥಳ ಬಿಟ್ಟು ಕದಲುವವರು ನಾವಲ್ಲ'' ಎಂದು ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಸಾವಿರಾರು ರೈತರು ದೆಹಲಿಯ ಗಡಿ ಭಾಗಗಳಾದ ಸಿಂಗು, ಟಿಕ್ರಿ ಮತ್ತು ಘಾಜಿಪುರ್ ಬಳಿ ಕಳೆದ 37 ದಿನಗಳಿಂದ ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಸರ್ಕಾರ ಹಾಗೂ ರೈತರ ನಡುವೆ ಹಲವು ಹಂತಗಳ ಮಾತುಕತೆ ನಡೆದಿದ್ದರೂ ಎಲ್ಲವೂ ವಿಫಲವಾಗಿದೆ. ಮುಂದಿನ ಹಂತದ ಮಾತುಕತೆಯು ಸೋಮವಾರ ಜನವರಿ 4 ರಂದು ನಡೆಯಲಿದೆ.