ಬೆಂಗಳೂರು, ಜ. 03 (DaijiworldNews/MB) : ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ಶಾಸಕ, ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿರಾಣಿ ವಿರುದ್ಧ ನ್ಯಾಯಾಲಯದ ಆದೇಶದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುರುಗೇಶ್ ನಿರಾಣಿ ಕಳೆದ ಜುಲೈ ತಿಂಗಳಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದು ಈ ವೇಳೆ ಹಿಂದೂ ದೇವತೆಗಳನ್ನು ಅವಮಾನಿಸಿದ್ದರು ಎಂದು ವರದಿಯಾಗಿದೆ. ಅವರು ಕಾರ್ಯಕ್ರಮದಲ್ಲಿ, "ಮಗಳನ್ನೇ ವಿವಾಹವಾದ ಬ್ರಹ್ಮ ನಮಗೆ ದೇವರು. 16 ಸಾವಿರ ಮಡದಿಯರು ಇರುವ ದನ ಕಾಯುವ ಕೃಷ್ಣ ನಮ್ಮ ದೇವರು. ಸರೋವರದಲ್ಲಿ ಮುಗ್ಧ ಬಾಲಕಿಯರು ಬೆತ್ತಲೆ ಸ್ನಾನ ಮಾಡುವಾಗ ಸೀರೆ ಕದ್ದ ಹುಡುಗ ನಮ್ಮ ದೇವರು. ತಲೆ ಮೇಲೆ ಒಬ್ಬಳು ತೊಡೆಯ ಮೇಲೆ ಒಬ್ಬ ಇಟ್ಟುಕೊಂಡವ ನಮ್ಮ ದೇವರು" ಎಂದು ಅವಹೇಳನ ಮಾಡಿದ್ದರು ಎಂದು ಹೇಳಲಾಗಿದೆ.
ಈ ಸಂಬಂಧ ಜುಲೈನಲ್ಲೇ ನಿರಾಣಿ ವಿರುದ್ಧ ರಾಜ್ಕುಮಾರ್ ಕಟುವ ಎಂಬವರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ನಿರಾಣಿ ವಿರುದ್ದ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯವು ಸೂಚಿಸಿದ್ದು, ಇದರಂತೆ ಐಪಿಸಿ ಸೆಕ್ಷನ್ 153A, 294A,295ರಡಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.