ನವದೆಹಲಿ, ಜ. 03 (DaijiworldNews/MB) : ಭಾರತದಲ್ಲಿ ಎರಡು ಕೊರೊನಾ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಕೋವಿಶೀಲ್ಡ್ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿರುವ ಅವರು, ''ಉತ್ಸಾಹಭರಿತ ಹೋರಾಟವನ್ನು ಬಲಪಡಿಸಲು ನಿರ್ಣಾಯಕ ತಿರುವು. ಆರೋಗ್ಯಕರ ಮತ್ತು ಕೊರೊನಾ ಮುಕ್ತ ರಾಷ್ಟ್ರದ ಹಾದಿಗೆ ಬಲ ತುಂಬಲು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ನ ಲಸಿಕೆಗಳ ಬಳಕೆಗೆ ಡಿಸಿಜಿಐ ಅನುಮೋದನೆ ನೀಡುತ್ತಿದೆ. ಭಾರತಕ್ಕೆ ಅಭಿನಂದನೆಗಳು. ನಮ್ಮ ಶ್ರಮಶೀಲ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅಭಿನಂದನೆಗಳು'' ಎಂದು ತಿಳಿಸಿದ್ದಾರೆ.
''ತುರ್ತು ಬಳಕೆಯ ಅನುಮೋದನೆ ನೀಡಲಾದ ಎರಡು ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆಯೆಂದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಸಂಗತಿ. ಆತ್ಮನಿರ್ಭರ ಭಾರತದ ಕನಸನ್ನು ಈಡೇರಿಸಲು ನಮ್ಮ ವೈಜ್ಞಾನಿಕ ಸಮುದಾಯಕ್ಕೆ ಇರುವ ಉತ್ಸಾಹವನ್ನು ಇದು ತೋರಿಸುತ್ತದೆ'' ಎಂದು ಹೇಳಿದ್ದಾರೆ.
''ಈ ಅತ್ಯುತ್ತಮ ಕೆಲಸಕ್ಕಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ಮತ್ತು ಎಲ್ಲಾ ಕೊರೊನಾ ಯೋಧರಿಗೆ ನಮ್ಮ ಕೃತಜ್ಞತೆಗಳು. ಇಂತಹ ಪ್ರತಿಕೂಲ ಸಂದರ್ಭಗಳಲ್ಲಿಯೂ ಅನೇಕ ಜೀವಗಳನ್ನು ಉಳಿಸಿದ್ದಕ್ಕಾಗಿ ನಾವು ಅವರಿಗೆ ಚಿರಋಣಿ'' ಎಂದಿದ್ದಾರೆ.