ಮಂಗಳೂರು, ಜ. 03 (DaijiworldNews/MB) : ''ಎಸ್ಡಿಪಿಐ ಬಿಜೆಪಿಯ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಹಳೆಯಂಗಡಿ ಪಂಚಾಯತ್ ಚುನಾವಣೆಯಲ್ಲಿ ಎಸ್ಡಿಪಿಐ ಬಿಜೆಪಿ ಜೊತೆಗೂಡಿ ನಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದಾರೆ'' ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್ಡಿಪಿಐಗೆ ಹೆಚ್ಚು ಸ್ಥಾನ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಎಸ್ಡಿಪಿಐನವರು ಬಿಜೆಪಿಯ ಒಂದು ಏಜೆಂಟಾಗಿದ್ದಾರೆ. ಈ ವಿಚಾರ ಈಗಾಗಲೇ ಜನರಿಗೆ ತಿಳಿದಿದೆ. ಮುಂದಿನ ದಿನದಲ್ಲಿ ಈ ಬಗ್ಗೆ ಜನರಿಗೆ ಸಂಪೂರ್ಣವಾಗಿ ಅರಿವಾಗಲಿದೆ'' ಎಂದು ಹೇಳಿದರು.
''ಎಸ್ಡಿಪಿಐನವರು ಯಾರ ಜೊತೆಗೆ ಒಡನಾಟ ಹೊಂದಿದ್ದಾರೆ, ಯಾರಿಗಾಗಿ ಕೆಲಸ ಮಾಡುತ್ತಾರೆ ಎಲ್ಲಾ ತಿಳಿದಿದೆ'' ಎಂದು ಕೂಡಾ ಮಿಥುನ್ ರೈ ಹೇಳಿದರು.
''ಆದರೆ ಕಾಂಗ್ರೆಸ್ ಒಂದು ಜ್ಯಾತ್ಯಾತೀತ ನಿಲುವಿರುವ ಬಲಿಷ್ಠ ಪಕ್ಷ. ಸರ್ವಧರ್ಮವನ್ನು ಒಂದೇ ತಕ್ಕಡಿಯಲ್ಲಿ ನೋಡುವ ಪಕ್ಷ. ಯಾವುದೇ ಧರ್ಮಕ್ಕೆ ಸೀಮಿತವಾದ ಪಕ್ಷ ಕಾಂಗ್ರೆಸ್ ಅಲ್ಲ. ನಮ್ಮ ಪಕ್ಷದ ನಾಯಕರ ಮೇಲೆ ನಮಗೆ ನಂಬಿಕೆ ಇದೆ'' ಎಂದು ಹೇಳಿದ ಅವರು, ''ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಅತೀ ಹೆಚ್ಚಿನ ಸದಸ್ಯರು ನಮ್ಮ ಪಕ್ಷದಿಂದ ಆಯ್ಕೆ ಆಗುತ್ತಾರೆ'' ಎಂದು ಭರವಸೆ ವ್ಯಕ್ತಪಡಿಸಿದರು.