ಶ್ರೀನಗರ, ಜ.03 (DaijiworldNews/PY): "ಕೊರೊನಾ ಲಸಿಕೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಅವು ಮಾನವೀಯತೆಗೆ ಸೇರಿದ್ದು" ಎಂದು ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಯುಪಿ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿ ಕೊರೊನಾ ಲಸಿಕೆಗಳನ್ನು ಬಿಜೆಪಿಯ ಲಸಿಕೆ ಎಂದು ಟೀಕೆ ಮಾಡಿದ್ದರು. ಇದರ ಬೆನ್ನಲ್ಲೇ ಒಮರ್ ಅಬ್ದುಲ್ಲಾ ಅವರು ಈ ಹೇಳಿಕೆ ನೀಡಿದ್ದಾರೆ.
"ನಾನು ಬಿಜೆಪಿಯ ಲಸಿಕೆಗಳನ್ನು ಹೇಗೆ ನಂಬಲಿ?. ನಾವು ಬಿಜೆಪಿಯ ಲಸಿಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಲಸಿಕೆ ತಯಾರಾದಾಗ ಎಲ್ಲರಿಗೂ ಕೂಡಾ ಉಚಿತ ಲಸಿಕೆ ಸಿಗುತ್ತದೆ" ಎಂದು ಅಖಿಲೇಶ್ ಯಾದವ್ ತಿಳಿಸಿದ್ದರು.
ಅಖಿಲೇಶ್ ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಒಮರ್ ಅಬ್ದುಲ್ಲಾ, "ಬೇರೆಯವರ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ನನ್ನ ಸರದಿ ಬಂದ ವೇಳೆ ನಾನು ಖುಷಿಯಿಂದ ಲಸಿಕೆ ಸ್ವೀಕರಿಸುತ್ತೇನೆ" ಎಂದಿದ್ದಾರೆ.
"ಹೆಚ್ಚು ಮಂದಿಗೆ ಲಸಿಕೆ ಹಾಕುವುದರಿಂದ ದೇಶ ಹಾಗೂ ಆರ್ಥಿಕತೆ ಉತ್ತಮವಾಗಿರುತ್ತದೆ. ಕೊರೊನಾ ಲಸಿಕೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಬದಲಾಗಿ ಅವುಗಳು ಮಾನವೀಯತೆಗೆ ಸೇರಿದ್ದು. ಬಡವರಿಗೂ ಕೂಡಾ ಶೀಘ್ರದಲ್ಲೇ ಲಸಿಕೆ ಹಾಕುತ್ತೇವೆ" ಎಂದು ತಿಳಿಸಿದ್ದಾರೆ.