ಬೆಂಗಳೂರು, ಜ. 03 (DaijiworldNews/MB) : ಹತ್ತು ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ದಿನದ 24 ಗಂಟೆಗಳೂ ಕೂಡಾ ತೆರೆದಿರಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಕಾರ್ಮಿಕರಿಗೆ ನಿತ್ಯ ಕೆಲಸದ ಅವಧಿ 8 ಗಂಟೆಯಂತೆ ವಾರಕ್ಕೆ 48 ಗಂಟೆ ಮಾತ್ರ ಇರಬೇಕು. ಹೆಚ್ಚುವರಿ ಕೆಲಸದ ಅವಧಿ ದಿನಕ್ಕೆ 10 ಗಂಟೆಗಿಂತ ಅಧಿಕವಾಗಿರಬಾರದು. ಸತತ ಮೂರು ತಿಂಗಳಲ್ಲಿ ಒಟ್ಟು ಹೆಚ್ಚುವರಿ ಕೆಲಸ ಅವಧಿ 50 ಗಂಟೆಯನ್ನು ದಾಟಬಾರದು. ರಜೆಯ ದಿನ ಕೆಲಸ ಮಾಡಿಸಿದರೆ ಅಥವಾ ಹೆಚ್ಚುವರಿ ಅವಧಿ ಎಂದು ಪರಿಗಣಿಸದೆ ದುಡಿಸಿದರೆ ಉದ್ಯೋಗದಾತರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲಾಗುವುದು. ಎಲ್ಲಾ ಕಾರ್ಮಿಕರಿಗೂ ಸರದಿಯಲ್ಲಿ ವಾರಕ್ಕೊಂದು ರಜೆ ನೀಡಬೇಕು. ಎಲ್ಲಾ ಕಾರ್ಮಿಕರ ವಿವರವನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ಪ್ರತಿದಿನ ರಜೆಯಲ್ಲಿರುವ ನೌಕರನ ಮಾಹಿತಿಯನ್ನೂ ಪ್ರದರ್ಶಿಸಬೇಕು. ವೇತನ ಕಾಯ್ದೆಯಂತೆ ಕಾರ್ಮಿಕರ ಸಂಬಳವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ರಾತ್ರಿ 8 ಗಂಟೆಯ ಬಳಿಕ ಮಹಿಳಾ ಕಾರ್ಮಿಕರನ್ನು ದುಡಿಸಲು ಅವಕಾಶವಿಲ್ಲ. ಮಹಿಳಾ ಕಾರ್ಮಿಕರಿಂದ ಲಿಖಿತ ಒಪ್ಪಿಗೆ ಪಡೆದು, ಎಲ್ಲ ಸೌಲಭ್ಯ ಒದಗಿಸಿ ರಾತ್ರಿ 8 ಗಂಟೆಯ ಬಳಿಕ ಮಹಿಳಾ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ನೀಡಬಹುದು. ಯಾವುದೇ ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕ್ಕಲ್ ಎಂ. ಸುಂದರ್ ಪ್ರತಿಕ್ರಿಯಿಸಿದ್ದು, ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆಯ ವ್ಯಾಪ್ತಿಯಲ್ಲಿರುವ ಎಲ್ಲ ಅಂಗಡಿ, ಮುಂಗಟ್ಟು, ಹೋಟೆಲುಗಳು 24 ಗಂಟೆಯೂ ತೆರೆದಿರಬಹುದು ಎಂಬ ಸರ್ಕಾರದ ಆದೇಶ ಸ್ವಾಗತಾರ್ಹ ಎಂದಿದ್ದಾರೆ.