ಬೆಂಗಳೂರು, ಜ. 03 (DaijiworldNews/MB) : ಇಲ್ಲಿನ ಅಪರಾಧ ತನಿಖಾ ಇಲಾಖೆ (ಸಿಐಡಿ)ಯು ಕೇಂದ್ರ ಗೃಹ ಸಚಿವಾಲಯ ಮತ್ತು ಗೂಗಲ್ ವೆಬ್ಸೈಟ್ಗೆ ನೂರು ಚೀನೀ ಅಪ್ಲಿಕೇಶನ್ಗಳಿಗೆ ನಿರ್ಬಂಧ ಹೇರುವ ಪ್ರಸ್ತಾಪವನ್ನು ಕಳುಹಿಸಿದೆ. ಸಾಲ ನೀಡುವ ನೆಪದಲ್ಲಿ ಈ ಆಪ್ಗಳು ಗ್ರಾಹಕರ ಮಾಹಿತಿಯನ್ನು ಕದಿಯುತ್ತಿರುವುದು ಕಂಡುಬಂದಿರುವ ನಿಟ್ಟಿನಲ್ಲಿ ಸಿಐಡಿ ಈ ಕ್ರಮ ಕೈಗೊಂಡಿದೆ.
ಸಾಂದರ್ಭಿಕ ಚಿತ್ರ
ಇತ್ತೀಚೆಗೆ, ಸಿಐಡಿ ಅಧಿಕಾರಿಗಳು ಸಾಲ ನೀಡುವ ನೆಪದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಚೀನಾ ಮೂಲದ ಕಂಪನಿಯೊಂದಕ್ಕೆ ಸೇರಿದ ಮೂವರನ್ನು ಬಂಧಿಸಿದ್ದರು. ತನಿಖೆಯ ಸಮಯದಲ್ಲಿ, ಗೂಗಲ್ ಸ್ಟೋರ್ನಲ್ಲಿರುವ ನೂರಕ್ಕೂ ಹೆಚ್ಚು ಅಪ್ಲಿಕೇಶನ್ಗಳು ಹಣಕಾಸಿನ ನೆರವು ನೀಡುವ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿವೆ ಎಂದು ತಿಳಿದು ಬಂದಿದೆ. ಹಾಗೆಯೇ ಈ ಅಪ್ಲಿಕೇಶನ್ಗಳು ಗೌಪ್ಯ ಮಾಹಿತಿಯನ್ನು ಕದಿಯುತ್ತಿರುವುದು ಕಂಡುಬಂದಿದೆ.
ಈ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ ಅಧಿಕಾರಿಗಳು ಈ ಅಪ್ಲಿಕೇಶನ್ಗಳನ್ನು ಗೂಗಲ್ ಸ್ಟೋರ್ನಲ್ಲಿ ನಿರ್ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಗೂಗಲ್ಗೆ ವಿವರವಾದ ವರದಿಯನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
''ಜನರು ಸಾಲ ಆಧಾರಿತ ಅಪ್ಲಿಕೇಶನ್ಗಳ ಬಳಕೆಯ ಬಗ್ಗೆ ಬಹಳ ಜಾಗರೂಕರಾಗಿರಬೇಕು ಎಂದು ಸಿಐಡಿ ಸೈಬರ್ ಕ್ರೈಮ್ ಶಾಖೆಯು ಟ್ವೀಟರ್ ಮುಖೇನ ಜನರಿಗೆ ಮನವಿ ಮಾಡಿದೆ. ಯಾವುದೇ ಸಮಸ್ಯೆಗಳು ಎದುರಾದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ. ಚೀನಾದ ಕಂಪನಿಗಳು ಸಾಲದ ಆ್ಯಪ್ಗಳಲ್ಲಿ ಹೂಡಿಕೆ ಮಾಡಿದ್ದು ಡಿಜಿಟಲ್ ಸಾಲ ವ್ಯವಹಾರದ ಬಗ್ಗೆ ಯಾವುದೇ ಅನುಮತಿ ಅಥವಾ ಅನುಮೋದನೆ ಪಡೆದಿಲ್ಲ ಎಂದು ತನಿಖೆಯ ಸಮಯದಲ್ಲಿ ತಿಳಿದು ಬಂದಿದೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
''ಈ ಕಂಪನಿಗಳು ಆನ್ಲೈನ್ ವ್ಯವಹಾರದ ನೆಪದಲ್ಲಿ ಗ್ರಾಹಕರ ಫೋನ್ ಸಂಖ್ಯೆಗಳನ್ನು ಸಂಗ್ರಹಿಸಿದ್ದವು. ಜನರಿಗೆ ಕೂಡಲೇ ಸಾಲ ಬೇಕೆಂದಾದರೆ ಸಾಲದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಜನರಿಗೆ ಸಲಹೆ ನೀಡುತ್ತಿದ್ದರು. ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿದ ನಂತರ, ಪ್ಯಾನ್ ಕಾರ್ಡ್ಗಳು, ಆಧಾರ್ ಮತ್ತು ಜನರ ಫೋಟೋಗಳನ್ನು ಸಂಗ್ರಹಿಸಿದ್ದರು. ಸಾಲದ ಮೊತ್ತವನ್ನು ವರ್ಗಾವಣೆ ಮಾಡಿದ ನಂತರ, ಅವರು ನೇರವಾಗಿ ಮೊಬೈಲ್ ಫೋನ್ಗಳಿಂದ ಗೌಪ್ಯ ಮಾಹಿತಿಯನ್ನು ಕದ್ದಿದ್ದಾರೆ'' ಎಂದು ಅಧಿಕಾರಿಗಳು ವಿವರಿಸಿದರು.
''ಕಂಪನಿಯ ದಕ್ಷಿಣ ಭಾರತದ ಕಾರ್ಯಾಚರಣೆಯ ಮುಖ್ಯಸ್ಥರನ್ನು ಬಂಧಿಸುವುದರ ಜೊತೆಗೆ, ಮಾನವ ಸಂಪನ್ಮೂಲ ಅಧಿಕಾರಿಗಳು 750 ಕಂಪ್ಯೂಟರ್, ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ಅವರಿಂದ ವಶಕ್ಕೆ ಪಡೆದಿದೆ'' ಎಂದು ಅಧಿಕಾರಿಗಳು ತಿಳಿಸಿದರು.