ಬೆಂಗಳೂರು, ಜ.03 (DaijiworldNews/PY): ಪಾದರಾಯನಪುರದ 11 ರಸ್ತೆಗಳಿಗೆ ಮರುನಾಮಕರಣ ಮಾಡುವ ವಿಚಾರದ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 11 ರಸ್ತೆಗಳಿಗೆ ಹೆಸರಿಸುವ ಪ್ರಸ್ತಾಪವನ್ನು ಕೈಬಿಡುವಂತೆ ಶಿಫಾರಸು ಮಾಡಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸಾಂದರ್ಭಿಕ ಚಿತ್ರ
ಪಾದರಾಯನಪುರ ಪ್ರಮುಖ ರಸ್ತೆಗಳಿಗೆ ಅಲ್ಪ ಸಮುದಾಯಕ್ಕೆ ಸೇರಿರುವ ಸಮಾಜ ಸೇವಕರ ಹೆಸರಿಡಲು ಬಿಬಿಎಂಪಿ ಮುಂದಾಗಿತ್ತು. ಈ ಬಗ್ಗೆ ಸಂಸದರಾದ ಅನಂತ್ ಕುಮಾರ್ ಹೆಗ್ಡೆ ಹಾಗೂ ಪಿ.ಸಿ.ಮೋಹನ್ ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಅನಂತ್ ಕುಮಾರ್ ಹೆಗ್ಡೆ ಹಾಗೂ ತೇಜಸ್ವಿ ಸೂರ್ಯ ಈ ಪ್ರಸ್ತಾಪವನ್ನು ಆಕ್ಷೇಪಿಸಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು.
ಇದೀಗ ಬಿಬಿಎಂಪಿ ಆಯುಕ್ತ ಮಂಜುನಾಥ್ ಅವರು ಈ ಪ್ರಕ್ರಿಯೆ ರದ್ದುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.